ಉಕ್ರೇನ್ ಸೇತುವೆ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಕೀವ್, ಜೂ.೨೩- ರಷ್ಯಾ ವಿರುದ್ಧದ ಯುದ್ದಕ್ಕೆ ಸಂಬಂಧಿಸಿದಂತೆ ಉಕ್ರೇನ್ ಬಹುದೊಡ್ಡ ಮುನ್ನಡೆ ಸಾಧಿಸಿದೆ. ೨೦೧೪ರಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಕ್ರೈಮಿಯಾದ ಮುಖ್ಯ ಭೂಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿಗೊಯಾಗಿದೆ.
ಉಕ್ರೇನಿಯನ್ ಕ್ಷಿಪಣಿಗಳು ಕ್ರೈಮಿಯಾ ಮುಖ್ಯ ಭೂಭಾಗವನ್ನು ಉಕ್ರೇನಿಯನ್ ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುವ ಕೆಲವು ಸೇತುವೆಗಳಲ್ಲಿ ಒಂದರ ಮೇಲೆ ಬಿದ್ದಿದೆ ಎಂದು ರಷ್ಯಾದ ನೇಮಕಗೊಂಡ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ದಕ್ಷಿಣ ಉಕ್ರೇನ್‌ನಲ್ಲಿ ರಷ್ಯಾದ ಸೇನಾ ಪಡೆಗಳಿಗೆ ಮುಖ್ಯ ಪೂರೈಕೆ ಮಾರ್ಗಗಳಲ್ಲಿ ಒಂದನ್ನು ಕಡಿತಗೊಳಿಸಿದಂತಾಗಿದೆ. ಈ ಸೇತುವೆಯ ಮೂಲಕ ರಷ್ಯಾ ಸೇನಾಪಡೆಗಳಿಗೆ ಶಸ್ತ್ರಾಸ್ತ್ರ ಸೇರಿದಂತೆ ಹಲವು ರೀತಿಯ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಈ ಸೇತುವೆಯನ್ನೇ ಉಕ್ರೇನ್ ಕ್ಷಿಪಣಿ ದಾಳಿಯ ಮೂಲಕ ಹಾನಿಮಾಡಿದೆ. ಇನ್ನು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕ್ರಮಿತ ಖೆರ್ಸನ್ ಪ್ರಾಂತ್ಯದಲ್ಲಿ ರಷ್ಯಾದ-ಸ್ಥಾಪಿತ ಆಡಳಿತದ ಮುಖ್ಯಸ್ಥ ವ್ಲಾಡಿಮಿರ್ ಸಾಲ್ಡೊ, ಇದೊಂದು ಬ್ರಿಟನ್‌ನಿಂದ ಬಂದ ಆದೇಶದ ಮೇರೆಗೆ ಉಕ್ರೇನ್ ಆಡಳಿತವು ನಡೆಸಿದ ಮತ್ತೊಂದು ಅರ್ಥಹೀನ ಕೃತ್ಯವಾಗಿದೆ. ವಿಶೇಷ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇದು ಏನನ್ನೂ ಪರಿಹರಿಸುವುದಿಲ್ಲ. ಸದ್ಯ ಸೇತುವೆಯನ್ನು ದುರಸ್ಥಿಗೊಳಿಸಿ, ಟ್ರಾಫಿಕ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇಲ್ಲಿನ ಪೂರ್ವ ಭಾಗದಲ್ಲಿ ರಷ್ಯಾದ ಸೇನಾಪಡೆಯನ್ನು ಉಕ್ರೇನ್ ಪಡೆ ನಿಲ್ಲಿಸಿದ್ದು, ಒಂದು ಮೀಟರ್ ಮುನ್ನಡೆಯಲು ಕೂಡ ಅವಕಾಶ ನೀಡಿಲ್ಲ ಎಂದು ಉಕ್ರೇನ್‌ನ ಉಪ ರಕ್ಷಣಾ ಸಚಿವೆ ಹನ್ನಾ ಮಲಿಯಾರ್ ಗುರುವಾರ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ತಿಳಿಸಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ರಷ್ಯಾದ ಸರಬರಾಜು ಮಾರ್ಗಗಳಲ ಮೇಲೆ ಉಕ್ರೇನ್ ದಾಳಿ ನಡೆಸುತ್ತಿದೆ. ಇಲ್ಲಿಯ ವರೆಗೆ ಎಂಟು ಹಳ್ಳಿಗಳನ್ನು ರಷ್ಯಾದಿಂದ ಮರುವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್ ತಿಳಿಸಿದೆ.