ಉಕ್ರೇನ್ ಬಂದರ್‌ಗಳ ಮೇಲೆ ರಷ್ಯಾ ದಾಳಿ

ಮಾಸ್ಕೋ, ಜು.೧೯- ಕ್ರೈಮಿಯಾಗೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ ಬಳಿಕ ರಷ್ಯಾ ಅಕ್ಷರಶಃ ರೌದ್ರ ರೂಪವನ್ನೇ ತಾಳಿದ್ದು, ಈಗಾಗಲೇ ಹಲವೆಡೆ ದಾಳಿ ತೀವ್ರಗೊಳಿಸಿದೆ. ಈ ನಡುವೆ ಉಕ್ರೇನ್‌ನ ಪ್ರಮುಖ ಬಂದರ್‌ಗಳ ಮೇಲೆ ರಷ್ಯಾ ದಾಳಿ ಆರಂಭಿಸಿದೆ.
ಕ್ರೈಮಿಯಾದ ಸೇತುವೆಗೆ ಸೋಮವಾರ ಉಕ್ರೇನ್ ದಾಳಿ ನಡೆದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಹಾಗೂ ಟರ್ಕಿ ನೇತೃತ್ವದಲ್ಲಿ ನಡೆದಿದ್ದ ಧಾನ್ಯ ಒಪ್ಪಂದದಿಂದ ರಷ್ಯಾ ಹಿಂದಕ್ಕೆ ಸರಿದಿತ್ತು. ಹಿಂದಿನ ಒಪ್ಪಂದದ ಅನ್ವಯ ಕಪ್ಪು ಸಮುದ್ರದಲ್ಲಿ ಸಾಗುವ ಧಾನ್ಯ ಹಡಗಿಗೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಉಂಟು ಮಾಡುವುದಿಲ್ಲ ಎಂದಾಗಿತ್ತು. ಆದರೆ ಇದೀಗ ಸೇತುವೆ ಮೇಲಿನ ದಾಳಿಯಿಂದಾಗಿ ರಷ್ಯಾ ಆಕ್ರೋಶಗೊಂಡಿದ್ದು, ಒಪ್ಪಂದದಿಂದ ಹಿಂದಕ್ಕೆ ಸರಿದಿದೆ. ಪರಿಣಾಮ ಸದ್ಯ ಇನ್ನು ಮುಂದೆ ಇಲ್ಲಿ ಧಾನ್ಯಗಳನ್ನು ಹೊತ್ತು ತೆರಳುವ ಹಡಗುಗಳ ಮೇಲೆ ಕೂಡ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಆಫ್ರಿಕಾ ಖಂಡ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿ ಆಹಾರ ಭದ್ರತೆಗೆ ತೀವ್ರ ಹಿನ್ನಡೆ ತರಲಿದೆ ಎನ್ನಲಾಗಿದೆ. ಸೂಕ್ತ ರೀತಿಯಲ್ಲಿ ಆಹಾರಗಳ ಪೂರೈಕೆ ಇಲ್ಲದೆ ಹಸಿವಿನಿಂದ ಸಂಕಷ್ಟಕ್ಕೀಡಾಗುವವರ ಸಂಖ್ಯೆಯಲ್ಲಿ ಕೂಡ ಏರಿಕೆ ದಾಖಲಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಕ್ರೈಮಿಯಾದ ಸೇತುವೆಯ ಮೇಲೆ ಉಕ್ರೇನ್ ದಾಳಿಗೆ ಪ್ರತಿಕಾರವಾಗಿ ಸಾಮೂಹಿಕ ಸೇಡು ತೀರಿಸಿಕೊಳ್ಳುವ ಭಾಗವಾಗಿ ಒಡೆಸಾದಲ್ಲಿ ಇಂಧನ ಸಂಗ್ರಹಣೆ ಮತ್ತು ಸಮುದ್ರದಲ್ಲಿ ಡ್ರೋನ್‌ಗಳನ್ನು ತಯಾರಿಸುವ ಸ್ಥಾವರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ಈ ನಡುವೆ ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್, ಉಕ್ರೇನ್ ಮತ್ತು ರಷ್ಯಾದ ಧಾನ್ಯ ಮತ್ತು ರಸಗೊಬ್ಬರವನ್ನು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಸುವ ನಿಟ್ಟಿನಲ್ಲಿ ಅನೇಕ ರೀತಿಯ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.