ಉಕ್ರೇನ್ ದಾಳಿ ಉದ್ಯಮಿ ಸಾವು

ಮಾಸ್ಕೋ, ಆ.೧- ಉಕ್ರೇನ್-ರಷ್ಯಾ ನಡುವಿನ ಯುದ್ದ ಸದ್ಯಕ್ಕೆ ಅಂತ್ಯವಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬದಲಾಗಿ ಮತ್ತಷ್ಟು ತೀವ್ರವಾಗಿದ್ದು, ಕ್ರಿಮಿಯಾದಲ್ಲಿನ ರಷ್ಯಾ ನೌಕಾಸೇನೆಯ ಪ್ರಧಾನ ಕಚೇರಿಯ ಮೇಲೆ ಉಕ್ರೇನ್ ತೀವ್ರ ದಾಳಿ ನಡೆಸಿದೆ. ಇದಕ್ಕೆ ತಿರುಗೇಟು ಎಂಬಂತೆ ಇದೀಗ ಉಕ್ರೇನ್‌ನ ಡೊಂಟೆಸ್ಕ್ ಪ್ರಾಂತ್ಯದ ಬಖ್ಮುತ್ ಮೇಲೆ ರಷ್ಯಾ ತೀವ್ರ ಶೆಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ಲಿನ ಪ್ರಖ್ಯಾತ ಕೃಷಿ ಉದ್ಯಮಿ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ಕೃಷಿ ಉದ್ಯಮಿಯನ್ನು ಒಲೆಕ್ಸಿ ವಡಾಟರ್ಸ್ಕಿ (೭೪) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಅವರ ಪತ್ನಿ ಕೂಡ ಮೃತಪಟ್ಟಿದ್ದಾರೆ. ಇಬ್ಬರ ನಿಧನಕ್ಕೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಂತಾಪ ವ್ಯಕ್ತಪಡಿಸಿದ್ದಾರೆ. ಡೊಂಟೆಸ್ಕ್ ಪ್ರಾಂತ್ಯದಲ್ಲಿ ಈಗಲೂ ೨ ಲಕ್ಷಕ್ಕಿಂತಲೂ ಅಧಿಕ ಉಕ್ರೇನಿಗರು ನೆಲೆಸಿದ್ದು, ಸದ್ಯ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದಕ್ಕೂ ಮುನ್ನ ರಶ್ಯಾ ಹಿಡಿತದಲ್ಲಿರುವ ಕ್ರಿಮಿಯಾದಲ್ಲಿರುವ ಅದರ ನೌಕಾ ಸೇನೆಯ ಪ್ರಧಾನ ಕಚೇರಿಯ ಮೇಲೆ ಉಕ್ರೇನ್ ಡ್ರೋನ್ ನಡೆಸಿದ್ದು, ಪರಿಣಾಮ ೬ ಮಂದಿ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡಿರುವ ರಶ್ಯಾ ಪಡೆ, ಬಖ್ಮುತ್ ಮೇಲೆ ತೀವ್ರ ಶೆಲ್ ದಾಳಿ ನಡೆಸಿದೆ. ಭಾರೀ ಸಂಖ್ಯೆಯ ಕ್ಷಿಪಣಿ ಹಾಗೂ ರಾಕೆಟ್‌ಗಳು ಬಖ್ಮುತ್ ಪ್ರದೇಶಕ್ಕೆ ಅಪ್ಪಲಿಸಿದ್ದು, ಹಲವು ಕಟ್ಟಡಗಳು ನೆಲಸಮವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದರ ನಡುವೆ ಮನೆಯೊಂದರ ಮೇಲೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಅಲ್ಲಿನ ಖ್ಯಾತ ಕೃಷಿ ಉದ್ಯಮಿ ಒಲೆಕ್ಸಿ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.