ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾ ಹಡಗಿಗೆ ಹಾನಿ

ಮಾಸ್ಕೋ, ಆ.೫- ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಇದೀಗ ಮತ್ತೊಂದು ಮಜಲಿಗೆ ಪ್ರವೇಶಿಸಿದ್ದು, ಸದ್ಯ ಎರಡೂ ಕಡೆಯಿಂದಲೂ ಭೀಕರ ದಾಳಿ ಆರಂಭವಾಗಿದೆ. ಇದೀಗ ಕಪ್ಪು ಸಮುದ್ರದಲ್ಲಿ ಉಕ್ರೇನ್‌ನ ಡ್ರೋನ್ ದಾಳಿಯಲ್ಲಿ ರಷ್ಯಾ ನೌಕಾಪಡೆಯ ಒಲೆನೆಗೊರ್ಸ್ಕಿ ಗೊರ್ನ್ಯಾಕ್ ಎಂಬ ಹೆಸರಿನ ಹಡಗು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾದ ಘಟನೆ ರಷ್ಯಾದ ಪ್ರಮುಖ ಬಂದರು ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ನೊವೊರೊಸಿಸ್ಕ್‌ನಲ್ಲಿ ನಡೆದಿದೆ.
ಸುಮಾರು ೪೫೦ ಕೆ.ಜಿ. ತೂಕದ ಡೈನಮೇಟ್ ಅನ್ನು ಹೊಂದಿದ್ದ ಉಕ್ರೇನ್‌ನ ಡ್ರೋನ್ ರಷ್ಯಾದ ಒಲೆನೆಗೊರ್ಸ್ಕಿ ಗೊರ್ನ್ಯಾಕ್ ಹಡಗಿನ ಮೇಲೆ ಭೀಕರ ರೀತಿಯಲ್ಲಿ ದಾಳಿ ನಡೆಸಿದೆ. ಸದ್ಯ ದಾಳಿ ನಡೆಸಿ, ಹಡಗು ನಾಶಗೊಳಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಉಕ್ರೇನ್ ನೌಕಾಪಡೆಯ ಈ ದಾಳಿಯು ಯುದ್ದದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಷ್ಯಾ ಮೇಲೆ ಈ ಹಿಂದೆ ಉಕ್ರೇನ್ ಅನೇಕ ಬಾರಿ ಕೌಂಟರ್ ದಾಳಿ ನಡೆಸಿದ್ದರೂ ಇದೀಗ ಸ್ವತಹ ಅದರ ನೌಕಾಪಡೆಯ ಹಡಗಿನ ಮೇಲೆಯೇ ಡ್ರೋನ್ ದಾಳಿ ನಡೆಸಿರುವುದು ದೊಡ್ಡ ತಿರುವು ಎನ್ನಲಾಗಿದೆ. ಆದರೆ ಅತ್ತ ರಷ್ಯಾ ಮಾತ್ರ ದಾಳಿಯಿಂದ ತನ್ನ ಹಡುಗಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದೆ. ತನ್ನ ನೌಕಾ ನೆಲೆಯ ಮೇಲೆ ಎರಡು ಸಮುದ್ರ ಡ್ರೋನ್‌ಗಳನ್ನು ಒಳಗೊಂಡ ಉಕ್ರೇನಿಯನ್ ದಾಳಿಯನ್ನು ನಾವು ಹಿಮ್ಮೆಟ್ಟಿಸಿದ್ದೇವೆ. ಅಲ್ಲದೆ ಹಡಗಿಗೆ ಯಾವುದೇ ಹಾನಿಯಾಗಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಅತ್ತ ಉಕ್ರೇನಿಯನ್ ಭದ್ರತಾ ಸೇವಾ ಮೂಲಗಳು ಒಲೆನೆಗೊರ್ಸ್ಕಿ ಗೊರ್ನ್ಯಾಕ್ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಉಕ್ರೇನ್‌ನ ಭದ್ರತಾ ಪಡೆ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ, ಡ್ರೋನ್ ಒಂದು ರಷ್ಯಾದ ಒಲೆನೆಗೊರ್ಸ್ಕಿ ಗೊರ್ನ್ಯಾಕ್ ಹಡಗಿನತ್ತ ದಾಳಿಗೆ ತೆರಳುತ್ತಿರುವುದು ಕಂಡುಬಂದಿದ್ದು, ಸದ್ಯ ಇದು ಎಲ್ಲೆಡೆ ವೈರಲ್ ಆಗಿದೆ. ಓಲೆನೆಗೊರ್ಸ್ಕಿ ಗೊರ್ನ್ಯಾಕ್ ಒಂದು ಲ್ಯಾಂಡಿಂಗ್ ಹಡಗಾಗಿದೆ. ಕಡಲತೀರದ ಇಳಿಯುವಿಕೆಗಾಗಿ ಉಭಯಚರ (ಆಂಫಿಬಿಯಸ್) ಪಡೆಗಳನ್ನು ಬಿಡುಗಡೆಗೊಳಿಸಲು ವಿನ್ಯಾಸಗೊಳಿಸಲಾಗಿದೆ ಆದರೆ ಬಂದರುಗಳಲ್ಲಿ ಸರಕುಗಳನ್ನು ಡಾಕ್ ಮಾಡಲು ಮತ್ತು ತ್ವರಿತವಾಗಿ ಇಳಿಸಲು ವಿನ್ಯಾಸಗೊಳಿಸಲಾಗಿದೆ.