ಉಕ್ರೇನ್‌ನಿಂದ ಶಾಂತಿ ಪ್ರಸ್ತಾವ

ರೋಮ್, ಮೇ ೧೪- ರಷ್ಯಾದ ಆಕ್ರಮಣ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರೋಮ್‌ಗೆ ಭೇಟಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿನ್ನೆ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ, ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್‌ನ ೧೦ ಅಂಶಗಳ ಶಾಂತಿ ಯೋಜನೆಯನ್ನು ಬೆಂಬಲಿಸುವಂತೆ ಪೋಪ್ ಬಳಿ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ಇದೊಂದು ದೊಡ್ಡ ಗೌರವ ಎಂದು ಪೋಪ್ ಅವರನ್ನು ಭೇಟಿ ಮಾಡಿದ ಬಳಿಕ ಝೆಲೆನ್ಸ್ಕಿ ಪ್ರತಿಕ್ರಿಯೆ ನೀಡಿದ್ದಾರೆ. ಮೂಲಗಳ ಪ್ರಕಾರ ಯುದ್ದದ ಸಂದರ್ಭ ರಷ್ಯನ್ ಪಡೆ ತೆಗೆದುಕೊಂಡು ಹೋಗಿರುವ ಉಕ್ರೇನಿಯನ್ ಮಕ್ಕಳ ವಾಪಸಾತಿಗೆ ವ್ಯಾಟಿಕನ್ ಸಹಾಯ ಮಾಡುವ ಭರವಸೆ ನೀಡಿದೆ ಎನ್ನಲಾಗಿದೆ. ಪೋಪ್ ಫ್ರಾನ್ಸಿಸ್ ಅವರ ಜೊತೆ ಝೆಲೆನ್ಸ್ಕಿ ಸುಮಾರು ೪೦ ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಅಲ್ಲದೆ ಉಕ್ರೇನ್‌ನ ಶಾಂತಿ ಪ್ರಸ್ತಾಪವನ್ನು ಬೆಂಬಲಿಸುವಂತೆ ಝೆಲೆನ್ಸ್ಕಿ ಅವರು ಪೋಪ್‌ಗೆ ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ ಉಕ್ರೇನ್‌ನ ಸುಮಾರು ೧೯,೫೦೦ಕ್ಕೂ ಹೆಚ್ಚು ಮಕ್ಕಳನ್ನು ರಷ್ಯಾ ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಇದಕ್ಕೂ ಮುನ್ನ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರನ್ನು ಝೆಲೆನ್ಸ್ಕಿ ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಉಕ್ರೇನ್‌ಗೆ ಎಲ್ಲಾ ರೀತಿಯ ಮಿಲಿಟರಿ ಹಾಗೂ ಆರ್ಥಿಕ ಬೆಂಬಲ ನೀಡುವುದಾಗಿ ಇಟಲಿ ಭರವಸೆ ನೀಡಿದ್ದು, ಅಲ್ಲದೆ ಯುರೋಪಿಯನ್ ಯೂನಿಯನ್ ಸದಸ್ಯತ್ವದಲ್ಲಿ ಕೂಡ ಬೆಂಬಲಿಸುವುದಾಗಿ ತಿಳಿಸಿದೆ.