ಉಕ್ರೇನ್‌ನಿಂದ ರಷ್ಯಾ ಬಾಂಬರ್ ಧ್ವಂಸ

ಸೈಂಟ್ ಪೀಟರ್ಸ್‌ಬರ್ಗ್, ಆ.೨೨- ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ರಷ್ಯಾದ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ದೀರ್ಘ-ಶ್ರೇಣಿಯ ಬಾಂಬರ್ ಒಂದು ಧ್ವಂಸಗೊಂಡಿದೆ. ಸೈಂಟ್ ಪೀಟರ್ಸ್‌ಬರ್ಗ್‌ನ ದಕ್ಷಿಣದಲ್ಲಿರುವ ಸೋಲ್ಟ್ಸಿ-೨ ವಾಯುನೆಲೆಯಲ್ಲಿ ಟುಪೋಲೆವ್ ಟು-೨೨ ಬೆಂಕಿಗೀಡಾಗಿರುವ ದೃಶ್ಯ ಹಾಗೂ ಚಿತ್ರಗಳು ಹರಿದಾಡುತ್ತಿದ್ದು, ಒಟ್ಟಿನಲ್ಲಿ ಇದೊಂದು ರಷ್ಯಾಗೆ ಬಹುದೊಡ್ಡ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.
ಯಾವುದೇ ಯುದ್ದದಲ್ಲಿ ಬಾಂಬರ್‌ಗಳು (ವಿಶೇಷವಾಗಿ ಬಾಂಬ್‌ಗಳನ್ನೇ ಸಾಗಿಸಲು ಬಳಸುವ ವಿಮಾನ) ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಇದೀಗ ರಷ್ಯಾದ ಪ್ರಮುಖ ಟುಪೋಲೆವ್ ಟು-೨೨ ಬಾಂಬರ್ ಅನ್ನು ಉಕ್ರೇನ್‌ನ ಡ್ರೋನ್ ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ ಎನ್ನಲಾಗಿದೆ. ಬಾಂಬರ್ ಹಾನಿಮಾಡಲಾಗಿದೆ. ಕಾಪ್ಟರ್ ಮಾದರಿಯ ಯುಎವಿಯಿಂದ ದಾಳಿ ನಡೆಸಲಾಗಿದೆ. ನವ್ಗೊರೊಡ್ ಪ್ರದೇಶದಲ್ಲಿನ ಮಿಲಿಟರಿ ಏರ್‌ಫೀಲ್ಡ್‌ನಲ್ಲಿ ಘಟನೆ ನಡೆದಿದೆ. ವಾಯುನೆಲೆಯ ವೀಕ್ಷಣಾ ಹೊರಠಾಣೆಯಿಂದ ಯುಎವಿ ಅನ್ನು ಪತ್ತೆಯಾಗಿದ್ದು, ಬಳಿಕ ಸಣ್ಣ ಶಸ್ತ್ರಾಸ್ತ್ರದಿಂದ ಹೊಡೆದುರುಳಿಸಲಾಗಿದೆ. ಭಯೋತ್ಪಾದಕ ಘಟನೆಯಲ್ಲಿ ಒಂದು ವಿಮಾನಕ್ಕೆ ಹಾನಿಯಾಗಿದ್ದು, ಹೆಚ್ಚಿನ ಯಾವುದೇ ಅವಘಡ ಸಂಭವಿಸಿಲ್ಲ. ಏರ್‌ಫೀಲ್ಡ್ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಬ್ದಕ್ಕಿಂತ ಎರಡು ಪಟ್ಟು ವೇಗದಲ್ಲಿ ಬಲಿಸುವ ಸಾಮರ್ಥ್ಯ ಹೊಂದಿರುವ ಟುಪೋಲೆವ್ ಟು-೨೨ ಬಾಂಬರ್ ಅನ್ನು ಉಕ್ರೇನ್‌ನ ನಗರಗಳ ಮೇಲಿನ ದಾಳಿಯಲ್ಲಿ ವ್ಯಾಪಕವಾಗಿ ಬಳಸಲಾಗುತಿತ್ತು. ಆದರೆ ಇದೀಗ ಇದೇ ಬಾಂಬರ್ ಅನ್ನೇ ಉಕ್ರೇನ್ ಡ್ರೋನ್ ಮೂಲಕ ಹೊಡೆದುರುಳಿಸಿದೆ. ಸದ್ಯ ರಷ್ಯಾ ಬಳಿ ೬೦ರ ಸಂಖ್ಯೆಯಲ್ಲಿ ಟುಪೋಲೆವ್ ಟು-೨೨ ಹೊಂದಿದ್ದು, ಹಾಗಾಗಿ ಒಂದು ವಿಮಾನದ ಹಾನಿಯಿಂದ ಹೆಚ್ಚಿನ ಹಿನ್ನಡೆ ಏನು ಸಂಭವಿಸಲ್ಲ ಎಂದು ಹೇಳಲಾಗಿದೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಉಕ್ರೇನ್‌ನ ದಾಳಿ ಸಾಮರ್ಥ್ಯದಲ್ಲಿ ಮಾತ್ರ ಹೆಚ್ಚಿನ ಬದಲಾವಣೆಯಾಗಿದೆ.