ಉಕ್ರೇನ್‌ನಿಂದ ಕ್ಲಸ್ಟರ್ ಬಾಂಬ್‌ಗಳ ಪರಿಣಾಮಕಾರಿ ಬಳಕೆ: ಅಮೆರಿಕಾ

ನ್ಯೂಯಾರ್ಕ್, ಜು.೨೧- ಈಗಾಗಲೇ ಉಕ್ರೇನ್‌ಗೆ ಅಪಾಯಕಾರಿ ಕ್ಲಸ್ಟರ್ ಬಾಂಬ್‌ಗಳನ್ನು ನೀಡುವ ಮೂಲಕ ಕೆಲವೊಂದು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕಾ ಇದೀಗ ಇದಕ್ಕೆ ಸಂಬಂಧಿಸಿದ ಹೇಳಿಕೆ ಬಿಡುಗಡೆ ಮಾಡಿದೆ. ರಷ್ಯಾ ವಿರುದ್ಧದ ಯುದ್ದದಲ್ಲಿ ಕ್ಲಸ್ಟರ್ ಬಾಂಬ್‌ಗಳನ್ನು ಉಕ್ರೇನ್ ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದೆ ಎಂದು ಅಮೆರಿಕಾ ತಿಳಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರಾಷ್ಟ್ರೀಯ ಭದ್ರತಾ ದಳದ ವಕ್ತಾರ ಜಾನ್ ಕಿರ್ಬಿ, ರಷ್ಯಾದ ರಕ್ಷಣಾತ್ಮಕ ಸ್ಥಾನಗಳು ಮತ್ತು ಕಾರ್ಯಾಚರಣೆಗಳಲ್ಲಿ ಕ್ಲಸ್ಟರ್ ಬಾಂಬ್‌ಗಳನ್ನು ಉಕ್ರೇನ್ ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂಬುದು ಆರಂಭಿಕ ಮಾಹಿತಿಯಿಂದ ಲಭ್ಯವಾಗಿದೆ. ಬಾಂಬ್‌ಗಳನ್ನು ಅವರು ಸಮಪರ್ಕ ರೀತಿಯಲ್ಲಿ ಕೂಡ ಬಳಸುತ್ತಿದ್ದಾರೆ. ಉಕ್ರೇನ್ ವಾಸ್ತವವಾಗಿ ರಷ್ಯಾದ ರಕ್ಷಣಾತ್ಮಕ ರಚನೆಗಳು ಮತ್ತು ರಕ್ಷಣಾತ್ಮಕ ಕುಶಲತೆಯ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಇಷ್ಟು ಮಾಹಿತಿ ಮಾತ್ರ ನೀಡಬಲ್ಲೆ ಎಂದು ಕಿರ್ಬಿ ತಿಳಿಸಿದ್ದಾರೆ. ಇನ್ನು ಕ್ಲಸ್ಟರ್ ಬಾಂಬ್‌ಗಳು ಅನೇಕ ಬಾಂಬ್‌ಲೆಟ್‌ಗಳ ಸರಣಿಯಾಗಿದ್ದು, ಅನೇಕ ರೀತಿಯ ಮಾರಕ ಅಸ್ತ್ರಗಳನ್ನು ಚದುರಿಸುತ್ತವೆ. ಅಲ್ಲದೆ ಹೀಗೆ ಚಿಮ್ಮಿಸಲ್ಪಡುವ ಕ್ಲಸ್ಟರ್ ಬಾಂಬ್‌ಗಳು ತಕ್ಷಣದ ಅವಧಿಗೆ ಸ್ಫೋಟಗೊಳ್ಳದೆ ಹಾಗೆಯೇ ಉಳಿದಿರುತ್ತದೆ. ಕಂದಕಗಳು ಮತ್ತು ಕೋಟೆಯ ಸ್ಥಾನಗಳಲ್ಲಿ ಕ್ಲಸ್ಟರ್ ಬಾಂಬ್‌ಗಳು ಪರಿಣಾಮಕಾರಿಯೇ ಕೆಲಸ ಮಾಡುತ್ತದೆ. ಹಾಗಾಗಿ ಇದು ಸಹಜವಾಗಿಯೇ ನಾಗರಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ೧೦೦ ಕ್ಕೂ ಹೆಚ್ಚು ದೇಶಗಳು ಇದನ್ನು ನಿಷೇಧಿಸಿದೆ. ಆದರೆ ರಷ್ಯಾ ಮೇಲೆ ಬೇಸಿಗೆಯಲ್ಲಿ ಪ್ರತಿದಾಳಿ ನಡೆಸುವಲ್ಲಿ ನಮ್ಮ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದೆ ಎಂಬ ಉಕ್ರೇನ್ ಮನವಿಯ ಮೇರೆಗೆ ಅಮೆರಿಕಾ ಅಪಾಯಕಾರಿ ಕ್ಲಸ್ಟರ್ ಬಾಂಬ್‌ಗಳನ್ನು ಸರಬರಾಜು ಮಾಡಿತ್ತು. ಅಲ್ಲದೆ ರೀತಿಯಲ್ಲಿ ಅಮೆರಿಕಾದ ಮಿತ್ರರಾಷ್ಟ್ರಗಳಾದ ಯುಕೆ, ಕೆನಡಾ, ನ್ಯೂಜಿಲ್ಯಾಂಡ್, ಸ್ಪೇನ್ ಮುಂತಾದ ದೇಶಗಳು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.