ಉಕ್ರೇನ್‌ನಲ್ಲಿ ಸ್ಫೋಟಕ ಸಾಗಾಣಿಕೆ ವಿಮಾನ ಸ್ಫೋಟ ೮ ಮಂದಿ ಸಾವು

ಕೀವ್, ಜು.೧೭- ಉಕ್ರೇನ್ ವಿಮಾನಯಾನ ಕಂಪೆನಿಯ ಸರಕು ಸಾಗಾಣಿಕೆ ವಿಮಾನವೊಂದು ಉತ್ತರ ಗ್ರೀಸ್‌ನ ಕವಲ ಪಟ್ಟಣದಲ್ಲಿ ಪತನಗೊಂಡು ಎಂಟು ಮಂದಿ ಮೃತಪಟ್ಟ ಘಟನೆ ನಡೆದಿದೆ. ವಿಮಾನದಲ್ಲಿ ೧೨ ಟನ್‌ಗಳಷ್ಟು ಸ್ಫೋಟಕ ಸಾಗಾಟ ಮಾಡಲಾಗುತಿತ್ತು ಎಂದು ಗ್ರೀಕ್ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಪತನದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ವಿಮಾನದಲ್ಲಿ ಸ್ಫೋಟ ಸಂಭವಿಸಿದೆ.
ಕಾರ್ಗೋ ಕ್ಯಾರಿಯರ್ ಮೆರಿಡಿಯನ್ ನಿರ್ವಹಿಸುವ ಸೋವಿಯತ್ ನಿರ್ಮಿತ ಟರ್ಬೊಪ್ರೊಪ್ ಆನ್ -೧೨ ವಿಮಾನ ಸೆರ್ಬಿಯಾದಿಂದ ಜೋರ್ಡಾನ್‌ಗೆ ಹೋಗುತ್ತಿತ್ತು ಎಂದು ಗ್ರೀಕ್ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸರಕು ಸಾಗಾಣಿಕೆ ವಿಮಾನದಲ್ಲಿ ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಮೂಲಗಳ ಪ್ರಕಾರ ಈ ವಿಮಾನದಲ್ಲಿ ಬರೊಬ್ಬರಿ ೧೨ ಟನ್‌ಗಳಷ್ಟು ಸ್ಫೋಟಕ ಸಾಮಾಗ್ರಿಗಳನ್ನು ಸಾಗಾಟ ಮಾಡಲಾಗುತಿತ್ತು ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ಘೋಷಣೆಯಾಗಿಲ್ಲ. ವಿಮಾನದ ಒಂದು ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಪೈಲಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತೆಸ್ಸಲೋನಿಕಿ ಅಥವಾ ಕವಲ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಲಾಯಿತು. ಪೈಲಟ್ ಕವಲ ವಿಮಾನ ನಿಲ್ದಾಣ ಹತ್ತಿರ ಎಂಬ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಂಡರು. ಆದರೆ ವಿಮಾನ ನಿಲ್ದಾಣದಿಂದ ಪಶ್ಚಿಮಕ್ಕೆ ೪೦ ಕಿಲೋಮೀಟರ್ ದೂರದಲ್ಲೇ ವಿಮಾನ ಪತನಗೊಂಡಿತು ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. “ಕೆಲ ನಿಮಿಷಗಳವರೆಗೂ ಸ್ಫೋಟದ ಸದ್ದು ಕೇಳಿ ಬರುತ್ತಿತ್ತು” ಎಂದು ಪ್ಯಾಜಿಯೊ ಪಾಲಿಕೆಯ ಮೇಯರ್ ಫಿಲಿಪ್ಪೋಸ್ ಅನಸ್ತಾಸಿಯಾದಿಸ್ ಹೇಳಿದ್ದಾರೆ. ವಿಮಾನ ಪತನಗೊಂಡ ಸ್ಥಳದಿಂದ ೩೦೦ ಮೀಟರ್ ದೂರದಲ್ಲಿ ಇದ್ದಿದ್ದಾಗಿ ಅವರು ತಿಳಿಸಿದ್ದಾರೆ. ವಿಮಾನ ಬೆಂಕಿಯ ಉಂಡೆಯಾಗಿ ದಟ್ಟ ಹೊಗೆ ಕಾರುತ್ತಾ ಬೀಳುವುದನ್ನು ಸ್ಥಳೀಯರು ನೋಡಿದ್ದಾರೆ. ಭಾರಿ ಸ್ಫೋಟದ ಸದ್ದುಗಳು ಕೇಳಿಸಿದ್ದರಿಂದ ವಿಮಾನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದಿರಬೇಕು ಎಂಬ ಶಂಕೆಯನ್ನು ಸ್ಥಳೀಯರು ಮತ್ತು ಗ್ರೀಕ್ ಮಾಧ್ಯಮದವರು ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.