ನ್ಯೂಯಾರ್ಕ್,ಏ.೨೦- ಇತ್ತೀಚಿಗಿನ ದಿನಗಳಲ್ಲಿ ಉಕ್ರೇನ್ ನೀಡುತ್ತಿರುವ ಹಣಕಾಸಿನ ನೆರವನ್ನು ಅಮೆರಿಕಾ ಇದೀಗ ಮತ್ತಷ್ಟು ಹೆಚ್ಚಿಸಿದೆ. ಇದೀಗ ಹೊಸ ಯೋಜನೆ ಭಾಗವಾಗಿ ಬುಧವಾರ ಉಕ್ರೇನ್‌ಗೆ ಸುಮಾರು ೩೨೫ ಮಿಲಿಯನ್ ಡಾಲರ್ ಮಿಲಿಟರಿ ನೆರವನ್ನು ಘೋಷಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟಾರೆಯಾಗಿ ಉಕ್ರೇನ್‌ಗೆ ಅಮೆರಿಕಾ ಬರೊಬ್ಬರಿ ೩೫ ಬಿಲಿಯನ್ ಡಾಲರ್ ನೆರವು ನೀಡಿದಂತಾಗಿದೆ.
ಇದೀಗ ಘೋಷಿಸಿದ ಮಿಲಿಟರಿ ನೆರವಿನಲ್ಲಿ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ (ಹಿಮಾರ್ಸ್), ಸುಧಾರಿತ ಕ್ಷಿಪಣಿಗಳು ಮತ್ತು ಟ್ಯಾಂಕ್ ವಿರೋಧಿ ಗಣಿಗಳಿಗೆ ಹೆಚ್ಚುವರಿ ಮದ್ದುಗುಂಡುಗಳು ಕೂಡ ಸೇರಿವೆ. ೨೦೨೨ರ ಫೆಬ್ರವರಿಯಲ್ಲಿ ರಷ್ಯಾದ ಆಕ್ರಮಣ ಆರಂಭವಾದ ಬಳಿಕ ಅಮೆರಿಕಾವು ಉಕ್ರೇನ್‌ಗೆ ನೀಡುತ್ತಿರುವ ಇದು ೩೬ನೇ ಭದ್ರತಾ ಪ್ಯಾಕೇಜ್ ಆಗಿದೆ. ಇನ್ನು ನೂತನ ಮಿಲಿಟರಿ ನೆರವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್, ಈ ಭದ್ರತಾ ನೆರವಿನ ಪ್ಯಾಕೇಜ್ ಹಿಮಾರ್ಸ್ ಮತ್ತು ಫಿರಂಗಿ ಸುತ್ತುಗಳಿಗೆ ಹೆಚ್ಚಿನ ಯುದ್ಧಸಾಮಗ್ರಿಗಳನ್ನು ಒಳಗೊಂಡಿದೆ. ಜೊತೆಗೆ ರಕ್ಷಾಕವಚ-ವಿರೋಧಿ ವ್ಯವಸ್ಥೆಗಳು, ಸಣ್ಣ ಶಸ್ತ್ರಾಸ್ತ್ರಗಳು, ಲಾಜಿಸ್ಟಿಕ್ಸ್ ಬೆಂಬಲ ವಾಹನಗಳು ಮತ್ತು ಯುದ್ಧಭೂಮಿಯಲ್ಲಿ ಉಕ್ರೇನ್‌ನ ರಕ್ಷಕರನ್ನು ಬಲಪಡಿಸಲು ಅಗತ್ಯವಾದ ನಿರ್ವಹಣಾ ಬೆಂಬಲವನ್ನು ಒಳಗೊಂಡಿದೆ. ರಷ್ಯಾ ಎಷ್ಟು ಸಮಯದ ವರೆಗೆ ಯುದ್ದ ಮುಂದುವರೆಸುತ್ತದೆಯೋ ಅಲ್ಲಿಯ ವರೆಗೆ ಅಮೆರಿಕಾ ಹಾಗೂ ಮಿತ್ರರಾಷ್ಟ್ರಗಳು ಉಕ್ರೇನ್ ಜೊತೆ ನಿಲ್ಲಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.