ಉಕ್ಕಿ ಹರಿಯುತ್ತಿರುವ  ಕೆರೆ; ತಗ್ಗು ಪ್ರದೇಶಗಳಿಗೆ ನುಗ್ಗುತ್ತಿರುವ ನೀರು

ಶಿವಮೊಗ್ಗ, ಜು. 12: ಶಿವಮೊಗ್ಗ ತಾಲೂಕಿನ ಬಸವನಗಂಗೂರು ಕೆರೆ ನಾಲೆ ಅವ್ಯವಸ್ಥೆಗೆ
ಸದ್ಯಕ್ಕೆ ಪರಿಹಾರ ಸಿಗುವ ಲಕ್ಷಣವಿಲ್ಲವಾಗಿದೆ. ಪ್ರಸ್ತುತ ಬೀಳುತ್ತಿರುವ ಧಾರಾಕಾರ
ಮಳೆಗೆ ಕೆರೆ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ಕೆ.ಹೆಚ್.ಬಿ ಪ್ರೆಸ್
ಕಾಲೋನಿ ಮತ್ತೆ ಜಲಾವೃತವಾಗುವಂತಾಗಿದೆ.
ಕೆರೆ ನೀರು ಹರಿದು ಹೋಗುವ ಕಾಲುವೆ ಹಾಗೂ ಚರಂಡಿಗಳ ಅವ್ಯವಸ್ಥೆಯಿಂದ ಕೆ.ಹೆಚ್.ಬಿ.
ಕಾಲೋನಿಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆ ಮೇಲೆ ನೀರು ಹರಿಯುತ್ತಿದೆ.
ಇದರಿಂದ ಜನ-ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುವಂತಾಗಿದೆ.
ಬಸವನಗಂಗೂರು ಕೆರೆ ನಾಲೆ ಅವ್ಯವಸ್ಥೆ ಪರಿಹಾರಕ್ಕೆ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ
ಸರ್ಕಾರ ಅನುಮತಿ ನೀಡಿದೆ. ಆದರೆ ಸಣ್ಣ ನೀರಾವರಿ ಇಲಾಖೆಯು ಇಲ್ಲಿಯವರೆಗೂ ಟೆಂಡರ್
ಕರೆದು ಕಾಮಗಾರಿ ಆರಂಭಿಸಿಲ್ಲ.
ಮತ್ತೊಂದೆಡೆ, ಕಳೆದ ಎರಡು ತಿಂಗಳುಗಳ ಹಿಂದೆಯೇ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ
ಅವರು ಕೆರೆ ನಾಲೆ ಅವ್ಯವಸ್ಥೆ ಹಾಗೂ ಜಲಾವೃತ ಸಮಸ್ಯೆ ಪರಿಹಾರಕ್ಕೆ
ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆ ನಾಲೆ ಒತ್ತುವರಿ
ತೆರವು ಕಾರ್ಯ ನಡೆಸಿತ್ತು. ಆದರೆ ಇದು ಪೂರ್ಣಗೊಂಡಿಲ್ಲ.
ಇನ್ನೊದೆಡೆ, ಕೆ.ಹೆಚ್.ಬಿ. ಬಡಾವಣೆಯಲ್ಲಿ ಕೆರೆ ನೀರು ಸರಾಗವಾಗಿ ಹರಿದು ಹೋಗುವ
ಕನಿಷ್ಠ ವ್ಯವಸ್ಥೆಯನ್ನು ಕರ್ನಾಟಕ ಗೃಹ ಮಂಡಳಿಯಾಗಲಿ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ
ಹಾಗೂ ತಾಲೂಕು ಆಡಳಿತ ಮಾಡಿಲ್ಲ.
ಜಿಲ್ಲಾಡಳಿತ ಕೆರೆ ನಾಲೆ ಅವ್ಯವಸ್ಥೆ ಹಾಗೂ ಕೆ.ಹೆಚ್.ಬಿ. ಕಾಲೋನಿಯಲ್ಲಾಗುತ್ತಿರುವ
ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ
ನಿವಾಸಿಗಳು ಆಗ್ರಹಿಸುತ್ತಾರೆ.