ಉಕ್ಕಿನ ಮನುಷ್ಯನಿಗೆ ಭಾರತ ರತ್ನ ಗೌರವಕ್ಕೆ ಸಂತಸ

ಬೀದರ್: ಫೆ.4:ಮಾಜಿ ಉಪ ಪ್ರಧಾನ ಮಂತ್ರಿ, ಅಪರೂಪದ ರಾಜಕೀಯ ಮುತ್ಸದ್ಧಿ, ಆಧುನಿಕ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಶ್ರೀ ಲಾಲಕೃಷ್ಣ ಆಡ್ವಾಣಿ ಅವರಿಗೆ ಕೇಂದ್ರ ಸರ್ಕಾರವು ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತಸ ತಂದಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಹೇಳಿದ್ದಾರೆ.
ಆಡ್ವಾಣಿ ಅವರು ಭಾರತದ ಸಮಗ್ರ ಅಭಿವೃದ್ಧಿ ಕನಸು ಕಂಡು ಅದರ ಸಾಕಾರಕ್ಕಾಗಿ ಅವಿರತ ದುಡಿದಿದ್ದಾರೆ. ದೇಶದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಅವರ ಪ್ರಯತ್ನ ಅವಿಸ್ಮರಣೀಯ. ಸಂಸದ, ಗೃಹ ಸಚಿವರು, ಉಪ ಪ್ರಧಾನ ಮಂತ್ರಿ ಹಾಗೂ ವಿವಿಧ ಹುದ್ದೆಗಳ ಮೂಲಕ ಐತಿಹಾಸಿಕ ಕೆಲಸ ಮಾಡಿದ ಶ್ರೇಯ ಆಡ್ವಾಣಿಯವರಿಗೆ ಸಲ್ಲುತ್ತದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಆಂದೋಲನಕ್ಕೆ ಶಕ್ತಿ ತುಂಬಿದ್ದಾರೆ. ಅವರ ರಾಷ್ಟ್ರಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ರಾಮ ರಥಯಾತ್ರೆ 1990ರಲ್ಲಿ ಹುಮನಾಬಾದ್ ಗೆ ಆಗಮಿಸಿತ್ತು. ಪಟ್ಟಣದ ಥೇರ್ ಮೈದಾನದಲ್ಲಿ ಅವರು ಮಾಡಿದ ಭಾಷಣ ನನ್ನಂಥ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ.
ಆಡ್ವಾಣಿ ಅವರ ಜೀವಮಾನ ಸಾಧನೆಗೆ ಭಾರತ ರತ್ನ ಪ್ರಶಸ್ತಿಯ ಗರಿ ಮುಡಿಗೇರಿದೆ ಎಂದು ಬಣ್ಣಿಸಿದ್ದಾರೆ.