ಈ ವರ್ಷ ವಾಡಿಕೆಗಿಂತ ಮಳೆ ಕಡಿಮೆ

ನವದೆಹಲಿ, ಏ.೧೧- ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದ್ದು, ೨೦ ಪ್ರತಿಶತದಷ್ಟು ಬರಗಾಲ ಬರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ.
ಮತ್ತೊಂದೆಡೆ, ಈ ಬಗ್ಗೆ ಸರ್ಕಾರಿ ಹವಾಮಾನ ಇಲಾಖೆ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ಸತತ ೪ ವರ್ಷಗಳಿಂದ ದೇಶದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಅದು ಕಡಿಮೆಯಾಗಲಿದೆ.
ಬೆಳೆಗಳು ಮಾನ್ಸೂನ್ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ೪ ತಿಂಗಳ ಅವಧಿಯಲ್ಲಿ ೮೬೮.೬ ಮಿಮೀ ಸರಾಸರಿ ಮಳೆಯಾಗಲಿದೆ ಎಂದು ಸ್ಕೈಮೆಟ್ ಅಂದಾಜಿಸಿದೆ.
ಅಧಿಕ ಮಳೆಯಾಗುವ ಮುನ್ಸೂಚನೆ ಇಲ್ಲದ ಕಾರಣ, ದೇಶದಲ್ಲಿ ಶೇಕಡಾ ೨೦ ರಷ್ಟು ಬರಗಾಲದ ಸಾಧ್ಯತೆ ಇರಲಿದೆ. ಸಾಮಾನ್ಯಕ್ಕಿಂತ ೧೫ ಪ್ರತಿಶತದಷ್ಟು ಕಡಿಮೆ (ಶೇಕಡಾ ೧೦೫ ರಿಂದ ೧೧೦ ರ ನಡುವೆ), ೨೫ ಪ್ರತಿಶತದಷ್ಟು (ಶೇ ೯೬ ರಿಂದ ೧೦೪ ರ ನಡುವೆ) ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಶೇ ೪೦. ರಷ್ಟಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಕೈಮೆಟ್‌ನ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್, ಎಲ್ ನಿನೊ ಕಾರಣದಿಂದಾಗಿ ಈ ವರ್ಷ ದುರ್ಬಲ ಮಾನ್ಸೂನ್ ಅನ್ನು ಉಂಟು ಮಾಡಲಿದೆ. ಇದು ಬರಗಾಲವನ್ನೂ ತರಲಿದೆ ಎಂದು ಹೇಳಿದ್ದಾರೆ.
ಭಾರತದ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಇದು ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖ ಇರಲಿದೆ ಎಂದು ಹೇಳಿದೆ.