ಈ ಬಾರಿ ಬದಲಾವಣೆಗಾಗಿ ಜನರ ಜತೆ ಕಾಂಗ್ರೆಸ್ ಶಪಥ ಮಾಡಿದೆ: ಎಂ.ಬಿ. ಪಾಟೀಲ

ವಿಜಯಪುರ,ಏ.25: ಈ ಬಾರಿ ಲೋಕಸಭೆಯಲ್ಲಿ ಬದಲಾವಣೆ ತರಲೇಬೇಕೆಂದು ನಾವೆಲ್ಲ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಾಗಠಾಣದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ನಾಗಠಾಣ ಭಾಗಕ್ಕೆ ಶಾಶ್ವತ ನೀರಿನ ಪರಿಹಾರಕ್ಕೆ ಕೆರೆ ತುಂಬಲಾಗುವುದು. ಮಕಣಾಪುರ ಕೆರೆ ತುಂಬಿಸಿದ್ದೇವೆ. ಮುಂದೆಯೂ ನಿಮ್ಮೊಂದಿಗೆ ನಾವೆಲ್ಲ ಇರುತ್ತೇವೆ. ಆಲಗೂರರು ಸಂಸದರಾದರೆ ಆಲಮಟ್ಟಿ ಎತ್ತರ ಹೆಚ್ಚಿಸಲು ಸಂಸತ್‍ನಲ್ಲಿ ಹೋರಾಟ ಮಾಡಲಿದ್ದಾರೆ. ಆದಾದರೆ ಜಿಲ್ಲೆ ಸಂಪೂರ್ಣ ನೀರಾವರಿ ಆಗುತ್ತದೆ ಎಂದು ಭರವಸೆ ನೀಡಿದರು.
ಮೋದಿಯವರ ಮುಖ ನೋಡಿ ಓಟು ಹಾಕಿ ಎನ್ನುವವರಿಗೆ ಮೋದಿಯವರು ಏನು ಮಾಡಿದ್ದಾರೆ ಎಂದು ಕೇಳಿ. ಸಬ್ ಕಾ ಸಾಥ್ ಎಂದವರು ಜಗಳ ಹಚ್ಚಿದ್ದಾರೆ. ಇನ್ನೂ ಮುಂದೆ ಹೋಗಿ ಹೆಣ್ಣುಮಕ್ಕಳ ತಾಳಿಯ ಬಗ್ಗೆ ಮಾತನಾಡುವ ಮಟ್ಟಕ್ಕೆ ಹೋಗಿದ್ದಾರೆ. ಚುನಾವಣಾ ಬಾಂಡ್‍ನಿಂದ ಇವರ ಬಂಡವಾಳ ಬಯಲಾಗಿದೆ. ಸ್ವಚ್ಛ ಸ್ವಚ್ಛ ಎಂದವರ ದೇಶದ ದೊಡ್ಡ ಹಗರಣ ಇದಾಗಿದೆ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ಹೇಳಿದಂತೆ ನಡೆದುಕೊಳ್ಳಲಿಲ್ಲ. ಆದರೆ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ನೀವು ನಮ್ಮನ್ನು ಪ್ರಶ್ನೆ ಮಾಡಿದಂತೆ ಜಿಗಜಿಣಗಿಯವರಿಗೆ ಕೇಳುವುದು ಆಗಲ್ಲ. ಅವರು ಸಿಗುವುದೇ ಇಲ್ಲ. ಹಾಲು ನೀಡದ ಹಸುವನ್ನೇ ಇಟ್ಟುಕೊಳ್ಳಲ್ಲ, ಇನ್ನು ಕೆಲಸ ಮಾಡದ ಸಂಸದ ಜಿಗಜಿಣಗಿ ಯಾಕೆ ಬೇಕು. ಐವತ್ತು ವರ್ಷ ಅಧಿಕಾರ ಅನುಭವಿಸಿದ ಅವರಿಂದ ನಯಾಪೈಸೆ ಕೆಲಸ ಮಾಡಿಲ್ಲ ಎಂದು ಕೇಳಿದರು.
ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ, ರೈತರು ಬರಗಾಲದಿಂದ ತತ್ತರಿಸಿದರೂ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋದಾಗ ಅದು ತಾಕೀತು ಮಾಡಿದಾಗ ಪರಿಹಾರ ನೀಡುವ ಪ್ರಸಂಗ ಬಂದಿದೆ. ಆದರೆ ಇನ್ನೊಂದು ಕಡೆ ಕಾಂಗ್ರೆಸ್ ರಾಜ್ಯದಲ್ಲಿ ಜನಾನುರಾಗಿಯಾಗಿ ಕೆಲಸ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಬರೀ ವೈಫಲ್ಯ ಕಂಡಿದೆ. ಕಾಂಗ್ರೆಸ್‍ಗೆ ಈ ಸಲ ಅಧಿಕಾರ ನೀಡಿದರೆ ಸಾಲ ಮನ್ನಾ ಮಾಡಲಾಗುತ್ತದೆ. ದೇಶದಲ್ಲೂ ಗ್ಯಾರಂಟಿ ಪರ್ವ ಆರಂಭವಾಗಲಿದೆ. ತಮಗೆ ಮತ ನೀಡಿದರೆ ನಿಮ್ಮ ವಿಶ್ಬಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.
ಇದೇ ಸಂದರ್ಭ ಮಾಜಿ ಜಿಪಂ ಸದಸ್ಯ ದಾನಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಯಶವಂತರಾಯಗೌಡ ಪಾಟೀಲ,ವೀಕ್ಷಕರಾದ ಡಾ.ಸಯೀದ್ ಬುರಾನ, ಮುಖಂಡರಾದ ಡಿ.ಎಲ್.ಚವ್ಹಾಣ, ಎಂ.ಆರ್.ಪಾಟೀಲ, ಶ್ರೀದೇವಿ ಉತ್ಲಾಸರ, ಸುಜಾತಾ ಕಳ್ಳಿಮನಿ, ಬಾಬು ರಾಜೇಂದ್ರ ನಾಯಕ, ಆರ್‍ಡಿ.ಹಕ್ಕೆ, ಶಹನವಾಜ ಮುಲ್ಲಾ, ಸೋಮನಾಥ ಕಳ್ಳಿಮನಿ, ಸುರೇಶ ಗೊಣಸಗಿ, ಹೊನಮಲ್ಲ ಸಾರವಾಡ, ರಾಮನಮಗೌಡ ಪಾಟೀಲ, ತುಕಾರಾಮ ಘೋರ್ಪಡೆ, ಶಫೀಕ ಮನಗೂಳಿ, ಶ್ರೀಮಂತ ಇಂಡಿ, ರಘುನಾಥ ಜಾಧವ ಅನೇಕರಿದ್ದರು.


ಅಬ್ ಕಿ ಬಾರ್ ಮೋದಿ ದೋಸೊ ಪಾರ್ ಕೂಡ ಆಗಲ್ಲ
ಅಬ್ ಕಿ ಬಾರ್ ಚಾರ್ ಸೌ ಪಾರ್ ಅನ್ನುತ್ತಿರುವ ಮೋದಿಯವರಿಗೆ ಈ ಸಲ ಜನ ಬುದ್ಧಿ ಕಲಿಸಿ ದೋಸೌ ಪಾರ್ ಕೂಡ ಆಗಲು ಬಿಡಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಮೋದಿ ದಯೆಯಿಂದ ಬಂಗಾರದ ಬೆಲೆ ಗಗನ ಮುಟ್ಟಿದೆ. ತಾಳಿ ಬಗ್ಗೆ ಮಾತನಾಡುವ ಅವರಿಂದ ಇನ್ನು ಮೇಲೆ ಹೆಣ್ಣುಮಕ್ಕಳು ಕಬ್ಬಿಣದ ತಾಳಿಯನ್ನೇ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಿದ್ದಂತೆ ಸಭೆ ನಡೆಯುತ್ತಿದ್ದ ಪಕ್ಕದ ಮನೆ ಮುಂದೆ ಕುಳಿತಿದ್ದ ಹೆಣ್ಣುಮಕ್ಕಳು ಇವರ ಮಾತಿಗೆ ದನಿಗೂಡಿಸಿ, ‘ಹೌದ್ರಿ ಸರ್.. ಮೋದಿಯವ್ರು ಬಂದ ಮ್ಯಾಲ ನಮ್ ಜೀವ್ನಾ ಸಾಕಾಗ್ಯಾದ.. ನಮ್ ಮಕ್ಳೀಗಿ ನೌಕ್ರಿ ಇಲ್ಲ, ನಮಗ ಎಲ್ಲಾ ತುಟ್ಡಿಯಾಗ್ಯಾದ..’ ಎಂದು ಎದ್ದು ನಿಂತು ಹೇಳಿದರು