ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಮಿಂಚುತ್ತಾರಾ
 ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಹಿಳೆಯರಿಗೆ ಆದ್ಯತೆ


ಎನ್.ವೀರಭದ್ರಗೌಡ
ಬಳ್ಳಾರಿ, ಮಾ.08: ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಅನೇಕರು ಮಹಿಳಾ ಶಾಸಕಿ, ಸಂಸದರಾಗಿದ್ದಾರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಯೂ ಮಹಿಳೆಯರಿಗೆ ಮತ್ತೆ ಆದ್ಯತೆ ದೊರೆಯುವ ಸಾಧ್ಯತೆಗಳು ಕಂಡು ಬರುತ್ತಿವೆ.
ಈ ಹಿಂದೆ ಅಲ್ಲಂಸುಮಂಗಳಮ್ಮ, ಬಸವರಾಜೇಶ್ವರಿ,  ಭಾಗಿರತಿ ಮರಳು ಸಿದ್ದನಗೌಡ, ಗುಜ್ಜಲ್ ವಿಜಯಲಕ್ಷ್ಮಿ ಆಯ್ಕೆಯಾಗಿ ಶಾಸನ ಸಭೆಗಳ ಪ್ರವೇಶಿಸಿದ್ದರು.
ನಂತರ ಅನೇಕರು ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲಾಗಲ್ಲಿಲ್ಲ. ಆದರೆ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಮಹಿಳೆಯರ ಹವಾ ಕಾಣತೊಡಗಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಎಂಪಿ ಪ್ರಕಾಶ್ ಅವರ ಪುತ್ರಿಯರಾದ ಎಂಪಿ ವೀಣಾ ಅಥವಾ ಎಂಪಿ ಲತಾ ಇಬ್ಬರಲ್ಲಿ ಒಬ್ಬರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುವ ಸಾಧ್ಯತೆ ಇದೆ.
ಇನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಸಂಡೂರು ಕ್ಷೇತ್ರದಿಂದ ಈ ಬಾರಿ ಬಿಜೆಪಿ ಪಕ್ಷದ ಸಂಸದ ವೈ ದೇವೇಂದ್ರಪ್ಪ ಅವರ ಪುತ್ರ ಮಂಜುನಾಥ್ ಅಥವಾ ಪತ್ನಿ ಮಹದೇವಮ್ಮ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ತೆರೆ ಮರೆಯ ಪ್ರಯತ್ನ ಜೋರಾಗಿ ನಡೆದಿದೆ. ಮೊದಲು ಈ ಕ್ಷೇತ್ರಕ್ಕೆ ಕಳೆದ ಬಾರಿಯ ಅಭ್ಯರ್ಥಿ ರಾಘವೇಂದ್ರ ಅವರ ಪತ್ನಿಯನ್ನು ಕಣಕ್ಕಿಳಿಸಲು ಕಾರ್ತಿಕ್ ಘೋರ್ಪಡೆ ಅವರು ಪ್ರಯತ್ನಿಸಿದ್ದರು. ಅವರು ನಿರಾಕರಿಸಿದ್ದರಿಂದ ಈಗ ಮಹದೇವಮ್ಮ ಅವರನ್ನು ಕಣಕ್ಕಿಳಿಸಲು ಅಮಿತ್ ಶಾ ಜೊತೆ ಮೊದಲ ಸುತ್ತಿನ ಮಾತುಕತೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಸಂಸದ ದೇವೇಂದ್ರಪ್ಪ ಅವರು ಸಂಪೂರ್ಣವಾಗಿ ನಿರಾಕರಿಸದೆ ಹಾಗೇನಾದರೂ ಆದರೆ ತಿಳಿಸುವೆ ಎಂದಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಈವರೆಗೆ ಮಹಿಳಾ ಪ್ರಬಲ ಪೈಪೋಟಿ ದೊರೆತಿಲ್ಲ ಈ ಬಾರಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ
 ಬಳ್ಳಾರಿ ನಗರ
ಈ ಕ್ಷೇತ್ರದಲ್ಲಿ ಒಮ್ಮೆ ಸಿಪಿಐ ಪಕ್ಷದ ಶಾರದಾ ಮಳೆಬೆನ್ನೂರು ಒಬ್ಬರು ಪ್ರಬಲ ಪೈಪೋಟಿ ನೀಡಿದ್ದು ಬಿಟ್ಟರೆ ಮತ್ತೆ ಕಂಡು ಬಂದಿಲ್ಲ. ಆದರೆ ಈ ಬಾರಿಯ ಚುನಾವಣೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಹಿಳೆಯರದ್ದೇ ಪಾರುಪತ್ಯ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ಕೆಕೆಆರ್ ಪಕ್ಷದಿಂದ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದು ಅಭ್ಯರ್ಥಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮಹಿಳೆಯರಿಗೆ ಸೀರೆ, ನಗದು ಹಂಚಿ, ಆಟೋ ಚಾಲಕರಿಗೆ ವಿಮೆ ಮಾಡಿಸಿ ಒಲವು ಗಳಿಸ ತೊಡಗಿದ್ದಾರೆ. ಬಳ್ಳಾರಿಯ ಸೊಸೆಯನ್ನು ಆಶೀರ್ವದಿಸಿ ಎಂದು ಮತದಾರರ ಮನಗೆಲ್ಲ ತೊಡಗಿದ್ದಾರೆ. ಇದನ್ನು ಗಮನಿಸಿರುವ ಬಿಜೆಪಿಯೂ ಸಹ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೇಗೆ ಎಂದು ಮಾಜಿ ಮೇಯರ್ ಪಾರ್ವತಿ ಇಂದು ಶೇಖರ್. ಡಾಕ್ಟರ್ ಅರುಣ ಕಾಮನನಿ ಅವರನ್ನು ಸಂಪರ್ಕಿಸಿದೆ ಇಷ್ಟೇ ಅಲ್ಲದೆ ಇನ್ನಿತರರು ಸ್ಪರ್ಧೆ ಬಯಸಿ ಪಕ್ಷದ ಬಾಗಿಲು ತಟ್ಟಿದ್ದಾರಂತೆ.
ಹಾಲಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಹಿಂಜರಿದರೆ ಮಹಿಳೆಯರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ ಬಿಜೆಪಿ ಮತ್ತು ಕೆ ಕೆ ಆರ್ ಪಿ ಚಿಂತನೆಯ ಮಧ್ಯೆ ಕಾಂಗ್ರೆಸ್ ನಲ್ಲೂ  ಪುರುಷರಲ್ಲಿ ಪೈಪೋಟಿ ಹೆಚ್ಚಿದೆ ಪಕ್ಷದಲ್ಲಿ ಮಹಿಳೆಯರಿಗೂ ಆದ್ಯತೆ ನೀಡಬೇಕಾಗಿರುವುದರಿಂದ ಈ ಬಾರಿ ಬಳ್ಳಾರಿಯಿಂದ ಮಹಿಳೆಯನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆ ನಡೆದಿದೆಯಂತೆ ಸದ್ಯ ಟಿಕೆಟ್ ಬೇಕೆಂದು ಮೇಯರ್ ರಾಜೇಶ್ವರಿ ಸುಬ್ಬರಾಯುಡು ಒಬ್ಬರಾಗಿದ್ದಾರೆ.
ಮೇಯರ್ ಹುದ್ದೆಗಾಗಿ ಇಲ್ಲವೇ ಅಶಿಫ್ ಮತ್ತು ನಂದೀಶ್ ನಡುವೆ ಪೈಪೋಟಿ ಇದ್ದಾಗ ಸದ್ದಿಲ್ಲದೇ ಮೇಯರ್ ಹುದ್ದೆ ಪಡೆದರು ಅವರು. ಅವರ ಆಡಳಿತ ಅವಧಿಯೂ ಈಗ ಮುಗಿಯ ತೊಡಗಿದೆ. ಏನೇ ಅಸಮಾಧಾನಗಳು ಬಂದರೂ ಎಲ್ಲರನ್ನು ಸಂಬಾಳಿಸಿಕೊಂಡು ಹೋದ ರಾಜೇಶ್ವರಿ ಅವರಿಗೆ ಟಿಕೆಟ್ ನೀಡಬಹುದೇ. ಅವರು ಸಹ ತಮ್ಮದೇ ಹಾದಿಯಲ್ಲಿ ಟೆಕೆಟ್ ಪ್ರಯತ್ನ ನಡೆಸಿದ್ದಾರೆಂಬ ಮಾಹಿತಿ ಇದೆ.
ಈ ಬಗ್ಗೆ ಪ್ರಶ್ನಿಸಿದರೆ ಇಷ್ಟೊಂದು ಪೈಪೋಟಿ ಇದೆ. ನಮಗೆಲ್ಲಿ ಟಿಕೆಟ್ ಸಿಕ್ಕುತ್ತೆ.
ಪ್ರಯತ್ನ ಇದೆ. ಪಕ್ಷ ಬಯಸಿದರೆ ಪ್ರಬಲ ಪೈಪೋಟಿ ನೀಡಿ ಗೆಲ್ಲಬಲ್ಲೆ ಎನ್ನುತ್ತಾರೆ ರಾಜೇಶ್ವರಿ ಅವರು.
ಒಟ್ಟಾರೆ ಮುಂಬರುವ ರಾಜಕೀಯ ಬೆಳವಣಿಗೆಯಲ್ಲಿ ಹರಪನಹಳ್ಳಿ, ಸಂಡೂರು, ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳು ಮಿಂಚುವ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಬಹುದಾಗಿದೆ.