ಈ ಬಾರಿ ಆರ್‌ಸಿಬಿ ಅಭಿಮಾನಿಗಳ ಬೆಂಬಲದಿಂದ ವಂಚಿತವಾಗುತ್ತಿದ್ದೇವೆ: ಎಬಿ ಡಿವಿಲಿಯರ್ಸ್


ನವದೆಹಲಿ, ಸೆ. 16- ಪ್ರತಿವರ್ಷ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಅಭಿಮಾನಿಗಳಿಂದ ಅದ್ದೂರಿ ಬೆಂಬಲ ಪಡೆಯುತ್ತಿತ್ತು. ಆದರೆ ಈ ಬಾರಿ ಐಪಿಎಲ್ ಯುಎಇಯಲ್ಲಿ ಆಯೋಜಿಸುತ್ತಿರುವುದರಿಂದ ಟೂರ್ನಿಯು ವಿಭಿನ್ನವಾಗಿರಲಿದೆ.
ಭಾರತದಲ್ಲಿಯೇ ಮಾರ್ಚ್‌ 29 ರಂದು ಐಪಿಎಲ್‌ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಿಸಿದ್ದರಿಂದ ಶ್ರೀಮಂತ ಫ್ರಾಂಚೈಸಿ ಲೀಗ್‌ ಅನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಲ್ಲದೆ, ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದರಿಂದ ಈ ಬಾರಿ ಐಪಿಎಲ್‌ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.
ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಹಿತದೃಷ್ಠಿಯಿಂದ ಎಲ್ಲಾ ಪಂದ್ಯಗಳನ್ನು ಮುಚ್ಚಿದ ಅಂಗಣಗಳಲ್ಲಿ ನಡೆಸಲಾಗುತ್ತಿದೆ. ದೊಡ್ಡ ಪ್ರಮಾಣದ ಅಭಿಮಾನಿಗಳ ಎದುರು ಆಡುತ್ತಿದ್ದಾಗ, ವಿಶೇಷವಾಗಿ ಜೋರಾಗಿ ಶಬ್ದ ಕೇಳಿದಾಗ ಆಟಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ಆದರೆ 2020ರ ಐಪಿಎಲ್‌ ಟೂರ್ನಿಗೆ ಅಭಿಮಾನಿಗಳಿಂದ ವಂಚಿತರಾಗುತ್ತಿದ್ದೇವೆ ಎಂಬುದನ್ನು ದಕ್ಷಿಣ ಆಫ್ರಿಕಾ ಆಟಗಾರ ಬೇಸರ ವ್ಯಕ್ತಪಡಿಸಿದರು.
“ಪ್ತತಿಯೊಬ್ಬರು ಸಂಪೂರ್ಣ ತುಂಬಿದ ಕ್ರೀಡಾಂಗಣದಲ್ಲಿ ಆಡಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಮಾನಿಗಳ ಬೆಂಬಲ ಹಾಗೂ ಜೋರು ಶಬ್ದ ಆಟಗಾರರನ್ನು ಏನೋ ಒಂದು ರೀತಿ ಉತ್ಸಾಹವನ್ನು ತುಂಬಿಸುತ್ತದೆ. ಒಮ್ಮೆ ಆರ್‌ಸಿಬಿ ಅಭಿಮಾನಿಗಳು ಎಚ್ಚೆತ್ತುಕೊಂಡರೆ, ನಿಲ್ಲಿಸಲು ಸಾಧ್ಯವೇ ಇಲ್ಲ. ಆದರೆ, ಈ ಬಾರಿ ಅಭಿಮಾನಿಗಳ ಎದುರು ಆಡುವುದರಿಂದ ವಂಚಿತನಾಗುತ್ತಿದ್ದೇನೆ. ಖಾಲಿ ಅಂಗಳದಲ್ಲಿ ಆಡುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ಆಡಿದ ಅನುಭವ ಇದೆ,” ಎಂದು ಡಿವಿಲಿಯರ್ಸ್ ಆರ್‌ಸಿಬಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
“ನಾನು ಅದೇ ರೀತಿ ಬೆಳೆದು ಬಂದಿದ್ದೇನೆ, ಕಳೆದ ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸಂಪೂರ್ಣ ತುಂಬಿದ ಕ್ರೀಡಾಂಗಣದಲ್ಲಿ ಆಡಿದ್ದೇನೆ. ಪ್ರತಿ ಆವೃತ್ತಿಯಲ್ಲೂ ದೇಶಿ ಆವೃತ್ತಿ ಆಡಲು ಹಿಂತಿರುಗುತ್ತಿದ್ದೆ. ನಾಲ್ಕು ದಿನಗಳ ಪಂದ್ಯದಲ್ಲಿ ನಾಲ್ಕು ಅಥವಾ ಐದು ಮಂದಿ ಗ್ಯಾಲರಿಯಲ್ಲಿ ಕಾಣಿಸುತ್ತಿದ್ದರು. ಆದರೆ ಈ ಬಾರಿ ಖಂಡಿತ ಆರ್‌ಸಿಬಿ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದರಲ್ಲಿ ಅನುಮಾನವೇ ಇಲ್ಲ,” ಎಂದು ಎಬಿಡಿ ಮರುಗಿದ್ದಾರೆ.
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೂರು ಬಾರಿ ಫೈನಲ್‌ ತಲುಪಿ ರನ್ನರ್ ಅಪ್‌ ಆಗಿತ್ತು. 2016ರ ಆವೃತ್ತಿಯಲ್ಲಿ ಕೊನೆಯ ಬಾರಿ ಆರ್‌ಸಿಬಿ ಫೈನಲ್‌ ಪ್ರವೇಶ ಮಾಡಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. 2019ರ ಆವೃತ್ತಿಯಲ್ಲಿ ಆರ್‌ಸಿಬಿ 14 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿತ್ತು.
ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ ಹಾಗೂ ಕಳೆದ ಆವೃತ್ತಿಯ ರನ್ನರ್‌ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಸೆ.19 ರಂದು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆರ್‌ಸಿಬಿ ಸೆ.21 ರಂದು ಸನ್‌ ರೈಸರ್ಸ್ ಹೈದರಾಬಾದ್‌ ತಂಡದ ವಿರುದ್ದ ಮೊದಲನೇ ಪಂದ್ಯವಾಡಲಿದೆ