ಈ ಬಾರಿಯೂ ಜನತೆ ಆಶೀರ್ವಾದ: ಜೋಶಿ

ಹುಬ್ಬಳ್ಳಿ, ಏ 15: ಈ ಬಾರಿಯೂ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡುವರು ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮರು ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಹುಬ್ಬಳ್ಳಿಯಲ್ಲಿಂದು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನು ನಾಮಪತ್ರ ಸಲ್ಲಿಸುವ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುವ ವಾಡಿಕೆ ಇದ್ದು, ಇಂದು ಕೂಡ ಭೇಟಿ ನೀಡಿದ್ದೇನೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಐದನೇ ಬಾರಿಗೆ ಆಯ್ಕೆ ಬಯಸಿ ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಮೆರವಣಿಗೆಯಲ್ಲಿ ಸುಮಾರು 30 ಸಾವಿರ ಜನ ಸ್ವಯಂ ಪ್ರೇರಿತವಾಗಿ ಸೇರಲಿದ್ದು, ಧಾರವಾಡ ಶಿವಾಜಿ ಸರ್ಕಲ್‍ದಿಂದ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಸ್ಥಳೀಯ ಶಾಸಕರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.