ಈ ದಸರೆಗೆ 29.25 ಕೋಟಿ ರೂ. ವೆಚ್ಚ: ಜಿಲ್ಲಾಧಿಕಾರಿ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.03:- 2023ರ ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ದಸರಾ ಆಚರಣ ಸಮಿತಿಯಿಂದ 29.25 ಕೋಟಿ ರೂ. ಹಣ ವೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸರ್ಕಾರ 2023ರ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿತ್ತು. ಆದರೆ, ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಸರಳವೂ ಅಲ್ಲದ, ಅದ್ದೂರಿಯೂ ಆಗದಂತೆ ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನಿಸಿತು. ಅದರಂತೆ 2023ರ ದಸರಾ ಉತ್ಸವಕ್ಕೆ 29,25,22,049 ರೂ. ಹಣ ವೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಮುಡಾ ಮತ್ತು ಸರ್ಕಾರದಿಂದ 25 ಕೋಟಿ ರೂ.: ದಸರಾ ಆಚರಣ ಸಮಿತಿಗೆ ಈ ಬಾರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ. ಅನುದಾನ ಬಂದಿದೆ. ಜತೆಗೆ ಈ ಬಾರಿ 2 ಕೋಟಿ 25 ಲಕ್ಷದ 70 ಸಾವಿರ ಹಣ ಪ್ರಾಯೋಜಕತ್ವದಿಂದ ಪಡೆಯಲಾಗಿದೆ. ಕಳೆದ ಬಾರಿ 32.50 ಲಕ್ಷ ರೂ. ಮಾತ್ರ ಪ್ರಾಯೋಜಕತ್ವ ಸ್ವೀಕೃತಿಯಾಗಿತ್ತು. ಹಾಗೆಯೇ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 1 ಕೋಟಿ 19 ಲಕ್ಷದ 95 ಸಾವಿರ ಹಾಗೂ ಆಹಾರ ಮೇಳದಿಂದ ಬಂದ ರಾಜಸ್ವ ಸ್ವೀಕೃತಿಯಿಂದ 81 ಸಾವಿರ ರೂ. ಸೇರಿ ಒಟ್ಟು 29.26 ಕೋಟಿ ಅನುದಾನ ಸಂಗ್ರವಾಗಿತ್ತು ಎಂದು ವಿವರಿಸಿದರು.
ಇದರಲ್ಲಿ ಮಂಡ್ಯ ಮತ್ತು ಚಾಮರಾಜನಗರ ದಸರಾ ಉತ್ಸವಕ್ಕೆ ತಲಾ ಒಂದೊಂದು ಕೋಟಿ ರೂ. ಹಾಗೂ ಹಾಸನ ದಸರಾಕ್ಕೆ 20 ಲಕ್ಷ ರೂ. ಸೇರಿ 2.20 ಕೋಟಿ ರೂ. ನೀಡಲಾಗಿದೆ ಎಂದರು.
ದಸರಾ ವೆಚ್ಚದ ವಿವರ: ದಸರಾ ಉತ್ಸವ ಅಂಗವಾಗಿ ರಚನೆಯಾಗಿದ್ದ 22 ಉಪ ಸಮಿತಿ ಸೇರಿದಂತೆ ಅರಣ್ಯ ಇಲಾಖೆ, ರಂಗಾಯಣ ಹಾಗೂ ವಿವಿÀ ಕಾಮಗಾರಿಗೆ 27,05,22,049 ರೂ. ವೆಚ್ಚಾಗಿದೆ. ಇದರಲ್ಲಿ ಸ್ವಾಗತ ಮತ್ತು ಆಮಂತ್ರಣ ಉಪಸಮಿತಿಗೆ 3.22 ಕೋಟಿ ರೂ., ಮೆರವಣಿಗೆ ಉಪಸಮಿತಿಗೆ 2.45 ಕೋಟಿ ರೂ., ಪಂಜಿನ ಕವಾಯತು ಉಪಸಮಿತಿಗೆ 1.24 ಕೋಟಿ ರೂ., ಸ್ತಬ್ಧಚಿತ್ರ ಉಪಸಮಿತಿಗೆ 25 ಲಕ್ಷ ರೂ., ರೈತ ದಸರಾ (ಗ್ರಾಮೀಣ ದಸರಾ)ಕ್ಕೆ 30 ಲಕ್ಷ ರೂ. ರೂ., ಸಾಂಸ್ಕೃತಿಕ ಉಪಸಮಿತಿಗೆ 2 ಕೋಟಿ ರೂ., ಲಲಿತಕಲೆ ಮತ್ತು ಕರಕುಶಲ ಉಪಸಮಿತಿಗೆ 17.90 ಲಕ್ಷ ರೂ., ಕವಿಗೋಷ್ಠಿ ಉಪಸಮಿತಿಗೆ 41.69 ಲಕ್ಷ ರೂ., ಯೋಗ ದಸರಾ ಉಪಸಮಿತಿಗೆ 20 ಲಕ್ಷ ರೂ., ಯುವ ಸಂÀ?ರಮ ಮತ್ತು ಯುವ ದಸರಾ ಉಪಸಮಿತಿಗೆ 7.88 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಗೆ 35 ಲಕ್ಷ ರೂ., ಚಲನಚಿತ್ರ ಉಪಸಮಿತಿಗೆ 45 ಲಕ್ಷ ರೂ., ಕುಸ್ತಿ ಉಪಸಮಿತಿಗೆ 45 ಲಕ್ಷ ರೂ., ಅರಣ್ಯ ಇಲಾಖೆಗೆ 1.60 ಕೋಟಿ ರೂ., ರಂಗಾಯಣಕ್ಕೆ 10 ಲಕ್ಷ ರೂ., ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ಮುಡಾ, ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದಿಂದ 6.05 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಿದರು.
ನೀರಸ ಯುವ ದಸರೆಗೆ 7.88 ಕೋಟಿ: ಸಾಂಪ್ರದಾಯಿಕ ದಸರಾ ಹೆಸರಿನಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯುವ ದಸರಾ ಮತ್ತು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 08 ದಿನಗಳ ಕಾಲ ನಡೆದ ಯುವ ಸಂಭ್ರಮಕ್ಕೆ ಬರೋಬ್ಬರಿ 7.88 ಕೋಟಿ ರೂ. ಹಣವನ್ನು ಸಮಿತಿ ವ್ಯಯಿಸಿದೆ. ಕಳೆದ ಬಾರಿ ಅದ್ದೂರಿ ದಸರಾದಲ್ಲಿ ಆರು ದಿನಗಳ ಕಾಲ ಯುವ ದಸರಾ ನಡೆದಿದ್ದಲ್ಲದೇ ಪ್ರೇಕ್ಷಕರ ಕುಳಿತುಕೊಳ್ಳಲು ಜರ್ಮನ್ ರೂಫಿಂಗ್ ಟೆಕ್ನಾಲಜಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ರೂಫಿಂಗ್ ವ್ಯವಸ್ಥೆ ಮಾಡದ ಹಿನ್ನೆಲೆ ಪ್ರೇಕ್ಷಕರು ಬಯಲಿನಲ್ಲೇ ಕುಳಿತು ಯುವ ದಸರಾ ವೀಕ್ಷಿಸಿದ್ದರು. ಜತೆಗೆ ನಾಲ್ಕು ದಿನಗಳು ಮಾತ್ರ ನಡೆದಿತ್ತು. ಹೀಗಿದ್ದರೂ 7.88 ಕೋಟಿ ರೂ. ಹಣವನ್ನು ಖರ್ಚು ಮಾಡಿರುವುದುನ ಅಚ್ಚರಿ ಮೂಡಿಸಿದೆ.
ಇತರೆ ಮೂಲದ ಹಣ ಲೆಕ್ಕದಲ್ಲಿಲ್ಲ: ದಸರಾ ಆಚರಣ ಸಮಿತಿಗೆ 29.25 ಕೋಟಿ ಅನುದಾನ ಸಿಕ್ಕಿದ್ದು, ಅದನ್ನು ವಿವಿಧ ಉಪ ಸಮಿತಿಗೆಗಳಿಗೆ ಖರ್ಚು ಮಾಡಿದೆ. ಆದರೆ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಸೆಸ್ಕ್ನಿಂದ ಮಾಡಿದ್ದ ದೀಪಾಲಂಕಾರಕ್ಕೆ 6 ಕೋಟಿ ರೂ. ಖರ್ಚಾಗಿದ್ದು, ಅದನ್ನು ಸೆಸ್ಕ್ ಬರಿಸಲಿದೆ. ಜತೆಗೆ ಸ್ವಚ್ಛತೆಗೆ ಪಾಲಿಕೆ ಶ್ರಮಿಸಿದ್ದು, ಅದಕ್ಕೆ 30 ಲಕ್ಷದಷ್ಟು ಹಣ ಖರ್ಚಾಗಿದೆ. ಅದನ್ನು ಪಾಲಿಕೆಯೇ ವ್ಯವಯಿಸಲಿದೆ. ಹಾಗೆಯೇ ಅರಮನೆ ಅಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಖರ್ಚುವೆಚ್ಚ 5 ಕೋಟಿ ರೂ. ಆಗಿದ್ದು,ಅದನ್ನು ಅರಮನೆ ಮಂಡಳಿ ಭರಿಸಿದೆ. ಹೀಗೆ ಕೆಲ ಉಪ ಸಮಿತಿಗಳೇ ವೆಚ್ಚ ಬರಿಸಿರುವುದೆಲ್ಲ ಸೇರಿ 12 ಕೋಟಿ ರೂ. ಆಗಲಿದೆ.
ಈ ಮೂಲಕ ಇಆ ಬಾರಿಯ ದಸರಾ ಉತ್ಸವಕ್ಕೆ ಸರ್ಕಾರ 42 ಕೋಟಿ ರೂ.ಗೂನ ಅಧಿಕ ಹಣ ಖರ್ಚುಮಾಡಿದೆ.