ಹಣ, ಕಾಂಚಾಣ, ದುಡ್ಡು, ದುಗ್ಗಾಣಿ, ಕರೆನ್ಸಿ, ನಾಣ್ಯ, ನೋಟು ಎಂದು ಏನೆಲ್ಲ ಹೆಸರುಗಳಿಂದ ಕರೆಯಿಸಿಕೊಳ್ಳುವ’ ಹಣ ‘ ವೆಂಬ ಮಾಯಾಂಗನೆ ತಾಳುವ ಅವತಾರಗಳು ಹತ್ತಾರು ! ದೇವಾನು ದೇವತೆಗಳು ,ರಾಜ ಮಹಾರಾಜರ ಕಾಲದಿಂದ ರಾಜಕಾರಣಿಗಳು ಆಳುವ ಈ ಕಾಲದವರೆಗೆ ಅದು ತಾಳಿದ ಸಹಸ್ರ ಸಹಸ್ರ ಅವತಾರಗಳಿಗೆ ಲೆಕ್ಕವಿಟ್ಟವರಾರು ? ಆದರೆ ಎಲ್ಲರ ಲಕ್ಷ್ಯ ಮಾತ್ರ ಲಕ್ಷ್ಮಿ ಕಟಾಕ್ಷದ ಕಡೆಗೇ !೨೦೧೬ ರ ನವಂಬರ್ ತಿಂಗಳಿನಲ್ಲಿ ನಡೆದ ನೋಟು ಅಮಾನ್ಯೀಕರಣ ಯಾರಿಗೆ ತಾನೇ ಗೊತ್ತಿಲ್ಲ ! ಬಡವ- ಬಲ್ಲಿದ ಎಂಬ ಭೇದ ಭಾವವಿಲ್ಲದೆ ಎಲ್ಲರಿಗೂ ಅದು ಮುಟ್ಟಿಸಿದ ಬಿಸಿ ಮಾತ್ರ ಎಂದಿಗೂ ಮರೆಯಲಾಗದು. ರಾಜ ರಾಣಿಯರಂತೆ ಅದುವರಿಗೆ ಮೆರೆದಾಡಿದ ೫೦೦ ಮತ್ತು ೧೦೦೦ ರೂ ನೋಟುಗಳು ಇದ್ದಕ್ಕಿದ್ದಂತೆ ನವಂಬರ್ ೮ ರ ರಾತ್ರಿಯಿಂದ ತಮ್ಮ ಮೌಲ್ಯ ಕಳೆದುಕೊಂಡು ನಟನೆ ನಿಲ್ಲಿಸಿದಾಗ ಎಲ್ಲೆಲ್ಲೂ ದಿಗ್ಭ್ರಮೆ ಆವರಿಸಿದಂತೆಯೇ ಆಯಿತು. ನಾಗರೀಕರ ಮೂಲೆ ಮುಂಕಟ್ಟು ಗಳಲ್ಲಿದ್ದ ನೋಟು ಬ್ಯಾಂಕಿನ ಮೂಲೆ ಮುಂಕಟ್ಟು ಸೇರಿದ್ದು ಈಗ ಒಂದು ಗತ ಇತಿಹಾಸ.ಅದೇ ಸಂದರ್ಭದಲ್ಲಿ ಪೀನಿಕ್ಸ್ ಹಕ್ಕಿಯಂತೆ ಹುಟ್ಟಿಕೊಂಡಿದ್ದು ೨೦೦೦ರೂಪಾಯಿ ಎನ್ನುವ ಈ ಗುಲಾಬಿ ಸುಂದರಿ .ತನ್ನ ಬೆಡಗು – ಬಿನ್ನಾಣಗಳಿಂದಲೇ ಸರ್ವರ ಗಮನ ಸೆಳೆದ ಈ ಪಿಂಕಿ ಬ್ಯಾಂಕುಗಳು, ಎಟಿಎಂಗಳಲ್ಲಿ ಮಾತ್ರವಲ್ಲ, ಬಡವರ ಕಡ್ಡಿಪುಡಿ ಚೀಲದಲ್ಲಿ, ಹಣವಂತರ ಲಾಕರಿನಲ್ಲಿ ,ಶ್ರೀಮಂತರ ಕೋಣೆಗಳಲ್ಲಿ ನೆಲೆ ಕಂಡುಕೊಳ್ಳುವಂತಾಯಿತು.ಆಗಂತೂಪಿಂಕಿ ಎಲ್ಲರ ಎದೆಯ ಹೃದಯ ಸುಂದರಿ ! ಏಕೋ ಆ ವೈಭವ ಬಹಳ ದಿನ ಉಳಿಯಲಿಲ್ಲ ! ಬರಬರುತ್ತ ಎಟಿಎಂಗಳಿಂದ ಪಿಂಕಿ ಮಾಯವಾದಳು. ಸಾಮಾನ್ಯರಿಂದ ಚಿಲ್ಲರೆ ಕಾರಣವಾಗಿ ದೂರವಾದಳು. ದಿನಸಿ ವಹಿವಾಟಿನಲ್ಲಿ ತನ್ನ ಆಟ ಮಂದಗೊಳಿಸಿದಳು. ಇದ್ದಂತವರ ಮರ್ಜಿ ಹಿಡಿದು ಹೋದಳೊ ಏನೋ! ಎಂಬ ಆಪಾದನೆಯನ್ನೂ ಪಿಂಕಿ ಕೇಳುವಂತಾದಳು. ಅಂತೂ ಕಳೆದೆರಡು ವರ್ಷಗಳಿಂದ ಪಿಂಕಿಯ ಸದ್ದು ಅಷ್ಟಕ್ಕಷ್ಟೇ ಎಂಬ ವಾತಾವರಣ. ಪಿಂಕಿಗೆ ಏನಾಯಿತೋ ಏನೊ ಬಲ್ಲವರಾರು .”ಅತ್ತೆಗೊಂದು ಕಾಲ ,ಸೊಸೆಗೊಂದು ಕಾಲ” ಎನ್ನುವಂತೆ ಹೊಸದಾಗಿ ಹುಟ್ಟುಪಡೆದ ೫೦೦ ರೂಪಾಯಿ ಎಂಬ ಬೆಡಗಿ ಎಲ್ಲೆಡೆ ತನ್ನ ಸಾಮ್ರಾಜ್ಯ ಸ್ಥಾಪಿಸುವಂತಾಯಿತು.!ಈಗ೨೦೨೩ ಮೇ ೨೩ ರಿಂದ ಪಿಂಕಿ ಮತ್ತೆ ಸುದ್ದಿಯಲ್ಲಿದ್ದಾಳೆ. ಪಿಂಕಿ ಬ್ಯಾಂಕ್ ಎಂಬ ತವರು ಮನೆಗೆ ಸದ್ದಿಲ್ಲದೆ ಮರ ಪ್ರಯಾಣ ಬೆಳೆಸಿದ್ದಾಳೆ. ‘ಆಡಿಬಾನನ್ನ ಕಂದ ಅಂಗಾಲು ತೊಳೆದೇನು’ ಎಂದು ಆದರಿಸುತ್ತಿದ್ದ ನಾವು ಈಗ’ ಹೋಗಿ ಬಾ ನನ್ನ ಕಂದ’ ಎಂದು ಹಾರೈಸಿ ಕಳುಹಿಸಬೇಕಾಗಿದೆ . ಮುಂದಿನ ಪಯಣದ ಪರಿ ಬಲ್ಲವರಾರು. ಪಿಂಕಿಯನ್ನು ಪ್ರೀತಿಯಿಂದ ಕಳುಹಿಸಿ ಕೊಡುವ ಜವಾಬ್ದಾರಿ ಮಾತ್ರ ನಮ್ಮೆಲ್ಲರ ಮೇಲಿದೆ.ದೇಶದ ಎಲ್ಲಾ ಬ್ಯಾಂಕುಗಳು, ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳು ಪಿಂಕಿಯನ್ನು ಬರಮಾಡಿಕೊಳ್ಳಲು ಸನ್ನದ್ಧವಾಗಿ ನಿಂತಿವೆ.ಪಿಂಕಿ ತನ್ನ ಬೆಲೆ ಕಳೆದುಕೊಂಡಿಲ್ಲ . ಅಮಾನ್ಯಿಕರಣದ ಪ್ರಶ್ನೆಯೇ ಇಲ್ಲ .ನಮ್ಮ ಅಂಗಳದಲ್ಲಿ ನಡೆದಾಡುವುದಿಲ್ಲ ಅಷ್ಟೇ! ಸಮಾಧಾನದಿಂದಲೇ ಪಿಂಕಿಯನ್ನು ಕಳಿಸಿ ಬನ್ನಿ. ರಿಸರ್ವ್ ಬ್ಯಾಂಕ್ ಬ್ಯಾಂಕುಗಳಲ್ಲಿ ಪಿಂಕಿಯ ಸ್ವಾಗತಕ್ಕೆ ಅನೇಕ ಏರ್ಪಾಟು ಗಳನ್ನು ಮಾಡಿದೆ.
೧- ರಿಸರ್ವ್ ಬ್ಯಾಂಕಿನ ಸ್ವಚ್ಛ ನೋಟು ನೀತಿಯ ಅನುಸಾರ ರೂ ೨೦೦೦ ನೋಟುಗಳ ಪ್ರಸರಣವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
೨- ಅದು ಕಾನೂನು ಬದ್ಧ ಚಲಾವಣೆಯನ್ನು ಕಳೆದುಕೊಂಡಿಲ್ಲ.
೩- ಆದರೆ ಒಂದು ನಿರ್ದಿಷ್ಟ ಅವಧಿಯ ಒಳಗಾಗಿ ಅಂದರೆ ೩೦ ಸೆಪ್ಟೆಂಬರ್ ೨೦೨೩ ರ ಒಳಗೆ ಈ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸ ಬೇಕಿದೆ .
೪-ದೇಶದೆಲ್ಲೆಡೆ ಇರುವ ರಿಸರ್ವ್ ಬ್ಯಾಂಕಿನ ಹತ್ತೊಂಬತ್ತು ಪ್ರಾದೇಶಿಕ ಕಚೇರಿಗಳಲ್ಲಿಯೂ ಈ ನೋಟುಗಳಿಗೆ ವಿನಿಮಯ ಪಡೆಯಬಹುದಾಗಿದೆ.
೫- ೨೩ ಮೇ ೨೦೨೩ ರ ನಂತರ ಬ್ಯಾಂಕುಗಳಲ್ಲಿ ಗ್ರಾಹಕರು ತಮ್ಮ ತಮ್ಮ ಖಾತೆಗಳಿಗೆ ಯಾವುದೇ ನಿರ್ಬಂಧ ಗಳಿಲ್ಲದೆ ನಿಯಮಾನುಸಾರ ಜಮಾ ಮಾಡಬಹುದಾಗಿದೆ.ಆದರೆ ಜನಧನ್, ಸರಳ ಉಳಿತಾಯ ಖಾತೆಯಂತಹ ಖಾತೆಗಳಿಗೆ ಆಯಾ ಖಾತೆಯ ನಿಯಮಾವಳಿಗಳು ಅನ್ವಯವಾಗುತ್ತದೆ .
೬- ಆ ಶಾಖೆಯಲ್ಲಿ ಖಾತೆದಾರ ಅಲ್ಲದವರು ಒಬ್ಬ ವ್ಯಕ್ತಿ ಒಂದು ಬಾರಿಗೆ 10 ನೋಟುಗಳನ್ನು ಅಂದರೆ ಒಟ್ಟು 20,000 ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.
೭- ಬ್ಯಾಂಕ್ ಮಿತ್ರ ಅರ್ಥಾತ್ ಬ್ಯಾಂಕ್ ವ್ಯವಹಾರ ಪ್ರತಿನಿಧಿಗಳ ಮೂಲಕ ಖಾತೆದಾರರಿಗೆ ದಿನವೊಂದಕ್ಕೆ ಎರಡು ನೋಟು ಅಂದರೆ 4000 ರೂ ಮೌಲ್ಯದವರೆಗೆ ವಿನಿಮಯ ಮಾಡಬಹುದಾಗಿದೆ.
೮- ಬ್ಯಾಂಕುಗಳ ಶಾಖೆಗಳಲ್ಲಿ ಒತ್ತಡ ನೀಗಿಸಲು, ಸಂಪೂರ್ಣ ಪ್ರಕ್ರಿಯೆಯು ಸುಗಮವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲಕರವಾಗಿ ನಡೆಯಲು ಸುಧೀರ್ಘ 4 ತಿಂಗಳ ಕಾಲ ಕಾಲಾವಕಾಶವನ್ನು ಅಂದರೆ ಸೆಪ್ಟೆಂಬರ್ 2023ರ ಕೊನೆಯ ದಿನದವರೆಗೆ ಜನರಿಗೆ ಅವಕಾಶವನ್ನು ನೀಡಲಾಗಿದೆ. ಸಾರ್ವಜನಿಕರು ತಮಗೆ ಅನುಕೂಲಕರವಾದ ಬ್ಯಾಂಕ್ ವ್ಯವಹಾರದ ದಿನದಂದು ಬ್ಯಾಂಕಿಗೆ ಹೋಗಿ ಜಮೆ ಅಥವಾ ವಿನಿಮಯ ವಿ ಸೌಲಭ್ಯವನ್ನು ಹೊಂದಬಹುದಾಗಿದೆ.
೯- ವಿನಿಮಯ ಸೌಲಭ್ಯವನ್ನು ಬ್ಯಾಂಕುಗಳು ಉಚಿತವಾಗಿ ಒದಗಿಸುತ್ತವೆ.
೧೦-ಬ್ಯಾಂಕುಗಳು ಒಳಬಂದ ೨೦೦೦ ದ ನೋಟುಗಳನ್ನು ಮರು ಚಲಾವಣೆಗೆ ಬಿಡುವಂತಿಲ್ಲ.
೧೧- ಬ್ಯಾಂಕುಗಳಿಂದ ಈ ಕುರಿತು ಸೇವಾ ಕೊರತೆಗಳು ಕಂಡುಬಂದಲ್ಲಿ ಬ್ಯಾಂಕಿನ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಅಲ್ಲಿ ಒಂದು ತಿಂಗಳಾದರೂ ಸಮಸ್ಯೆ ಬಗೆಹರಿಯದಿದ್ದಲ್ಲಿ ನಂತರ ರಿಸರ್ವ್ ಬ್ಯಾಂಕಿನ ಗಮನಕ್ಕೂ ತರಬಹುದು.
೧೨- ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಮಹಿಳೆಯರು ಈ ಕಾರ್ಯಕ್ಕಾಗಿ ಬ್ಯಾಂಕಿಗೆ ಬಂದಾಗ ಅವರ ಬಗ್ಗೆ ವಿಶೇಷ ಗಮನವನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕುಗಳಿಗೆ ಸೂಚನೆಯನ್ನು ನೀಡಿದೆ.