ಈಶ ನಡೆ ಬಿಸಿ ಬೇಸರ

ಬೆಂಗಳೂರು,ಏ.೧: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಡೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಚಿವರಾದ ಕೆ ಎಸ್ ಈಶ್ವರಪ್ಪನವರು ಮುಖ್ಯಮಂತ್ರಿಗಳ ವಿರುದ್ಧ ನೇರವಾಗಿ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿರುವುದು ಸರಿಯಾದ ಕ್ರಮ ಅಲ್ಲ ಎಂದು ಬಿ.ಸಿ.ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಯಾವುದೇ ವಿಷಯಗಳು ಇದ್ದರೂ ಕೂಡ ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲು ಅವಕಾಶವಿದೆ. ಹೀಗಿದ್ದರೂ ಕೂಡ ಸಂಪುಟ ಸಭೆಯಲ್ಲಿ ಯಾವುದೇ ವಿಷಯವನ್ನು ಈಶ್ವರಪ್ಪನವರು ಪ್ರಸ್ತಾಪ ಮಾಡದೆ ಈ ರೀತಿ ನೇರವಾಗಿ ಏಕಾಏಕಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದು ಹಿರಿಯರಾದ ಈಶ್ವರಪ್ಪನವರಿಗೆ ಶೋಭೆ ತರುವಂತಹದ್ದಲ್ಲ ಎಂದು ಅವರು ಹೇಳಿದ್ದಾರೆ
.ಯಾವುದೇ ತಪ್ಪನ್ನು ಮಾಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.