ಈಶ್ವರ ಖಂಡ್ರೆ ಮತ್ತು ರಹೀಂಖಾನ ಅವರಿಗೆ ಡಿಸಿಎಂಹುದ್ದೆ ನೀಡಲು ರಮೇಶ ಬಿರಾದಾರ, ಬಸವರಾಜ ನಿಟ್ಟೂರೆ ಒತ್ತಾಯ

ಬೀದರಃ ಮೆ.18: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿ ಸರ್ಕಾರ ರಚನೆ ಮಾಡಲಿದ್ದು, ಬೀದರ ಜಿಲ್ಲೆಯಿಂದ ಗೆದ್ದು ಬಂದಿರುವ ಭಾಲ್ಕಿಯ ಶಾಸಕ ಈಶ್ವರ ಖಂಡ್ರೆಯವರಿಗೆ ಮತ್ತು ಬೀದರಿನ ಶಾಸಕ ರಹೀಂಖಾನ ಅವರಿಗೆ ಡಿಸಿಎಂ. ಸ್ಥಾನ ನೀಡಬೇಕೆಂದು ರಹೀಂಖಾನ ಅಭಿಮಾನಿ ಬಳಗದ ಮುಖಂಡರಾದ ಬಸವರಾಜ ನಿಟ್ಟೂರ, ರಮೇಶ ಬಿರಾದಾರ ಅವರು ಪಕ್ಷದ ವರಿಷ್ಠರಿಗೆ, ಎಐಸಿಸಿ ಅಧ್ಯಕ್ಷರಿಗೆ, ಮತ್ತು ರಾಜ್ಯದ ವರಿಷ್ಠರಿಗೆ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಾಸಕ ರಹೀಂಖಾನ ಅವರು ಈ ಹಿಂದೆ ಸಚಿವರಾಗಿದ್ದಾಗ ತಮಗೆ ದೊರಕಿರುವ ಅವಧಿಯಲ್ಲಿ ಸಾಕಷ್ಟು ಅಭಿವರದ್ಧಿ ಕಾರ್ಯಗಳು ಮಾಡಿದ್ದಾರೆ. ಶಾಸಕರ ಅವಧಿಯಲ್ಲಿಯೂ ಸಹ ಶರವೇಗದಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ.

ಆದ್ದರಿಂದಲೇ ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ಜನ ಅವರಿಗೆ ಪ್ರಚಂಡ ಬಹುಮತದಿಂದ ಸತತ ನಾಲ್ಕನೇ ಬಾರಿ ಗೆಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಅವರುಗಳು ಒತ್ತಾಯಿಸಿದರು. ಈಶ್ವರ ಬಿ. ಖಂಡ್ರೆಯವರು ಕೆಪಿಸಿಸಿಐ ಕಾಯಾಧ್ಯಕ್ಷರಾಗಿ ಬಿಎಸ್.ಎಸ್.ಕೆಯ ಅಧ್ಯಕ್ಷರಾಗಿ ದುಡಿದಿದ್ದು, ಸಚಿವರಾಗಿದ್ದಾಗ ಭಾಲ್ಕಿ ಮತ್ತು ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಾಜನತೆ ಈ ಸಲದ ಚುನಾವಣೆಯಲ್ಲಿ ಸುಮಾರು 27 ಸಾವಿರಕೂ ಹೆಚ್ಚು ಮತಗಳಿಂದ ಜಯ ಸಾಧಿಸಿರುವರು. ಇವರು ಸಹ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಇವರಿಗೂ ಡಿಸಿಎಂ. ಸ್ಥಾನ ನೀಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕಾರ್ಯಗಳಿಗಾಗಿ ಅವಕಾಶ ಕಲ್ಪಿಸಬೇಕೆಂದು ಬಸವರಾಜ ನಿಟ್ಟೂರ, ಧಬಾಲೆ, ರಮೇಶ ಬಿರಾದಾರ, ಶಿವು ಶ್ರೀಮಂಡಲ, ಮಲ್ಲಮ್ಮ ಪ್ರತಾಪನಗರ, ಸಂಗೀತಾ ಪಾಟೀಲ, ಪಪ್ಪು ಪಾಟೀಲ ವಿದ್ಯಾನಗರ ಕಾಲೋನಿ, ಬೀದರ ಅವರುಗಳು ಇಂದು ಬೀದರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ಒತ್ತಾಯಿಸಿದ್ದಾರೆ.