ಈಶ್ವರ ಖಂಡ್ರೆ ಡಿಸಿಎಂ ಆಗಲಿ: ಮಠಾಧೀಶರ ಆಗ್ರಹ

ಕಲಬುರಗಿ,ಮೇ 15: ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ
ಈಶ್ವರ ಖಂಡ್ರೆ ಅವರಿಗೆ ನೂತನ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಇಲ್ಲಿನ ಚವದಾಪುರಿ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು ಹಾಗೂ ಮುಗಳನಾಗಾವಿ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶ್ರೀಗಳು, ಕಲ್ಯಾಣ ಕರ್ನಾಟಕ ಪ್ರದೇಶ ಒಳಗೊಂಡಂತೆ ಇಡೀ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಂತ ಪ್ರಯುಕ್ತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಬಹುಮತ ಲಭಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ 16 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿದ್ದರು. ಆದರೆ ಈ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ 34 ಶಾಸಕರು ಆಯ್ಕೆಗೊಂಡು ಪಕ್ಷದ ಬಲ ಹೆಚ್ಚಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿಯಲ್ಲಿ ಕೇವಲ 18 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಗೊಳ್ಳುವ ಮೂಲಕ ಸಮುದಾಯ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಉಭಯ ಶ್ರೀಗಳು ವ್ಯಾಖ್ಯಾನಿಸಿದ್ದಾರೆ.
ಹಾಗಾಗಿ, ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಸಮುದಾಯವನ್ನು ರಾಷ್ಟ್ರ ಮಟ್ಟದಲ್ಲಿ ಸಂಘಟಿಸುವ ಬಹುದೊಡ್ಡ ಹೊಣೆಗಾರಿಕೆ ನಿಭಾಯಿಸುತ್ತಿರುವ ಈಶ್ವರ ಖಂಡ್ರೆ ಅವರಿಗೆ ಈ ಬಾರಿಯ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಸಮುದಾಯದಲ್ಲಿ ಸಮಾಧಾನ ನೆಲೆಸಲಿದೆ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.