
ಔರಾದ್ : ಮೇ.22:ಕಲ್ಯಾಣ ಕರ್ನಾಟಕದ ಹಿರಿಯ ನಾಯಕ ಹಾಗೂ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರಿಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಬೇಕು ಎಂದು ಔರಾದ್ ಮೀಸಲು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸೀಟು ಪಡೆಯಲು ವೀರಶೈವ ಲಿಂಗಾಯತ ಸಮಾಜದ ಜನರು ಕಾಂಗ್ರೆಸ್‍ಗೆ ಬೆಂಬಲಿಸಿದ್ದಾರೆ. ಹಿರಿಯ ಅನುಭವಿ ರಾಜಕಾರಣಿ ಖಂಡ್ರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಕಳೆದ ಅನೇಕ ದಶಕಗಳಿಂದ ಪಕ್ಷದ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಈಶ್ವರ ಖಂಡ್ರೆ ಅವರ ನಾಯಕತ್ವದಿಂದ ಲಿಂಗಾಯತರ ಜನರು ಪಕ್ಷ ಅಧಿಕಾರಕ್ಕೆ ತರಲು ಜೈಜೋಡಿಸಿದ್ದಾರೆ. ಖಂಡ್ರೆ ಅವರಿಗೆ ಉನ್ನತ ಸಚಿವ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕಲ್ಯಾಣ ಕರ್ನಾಟಕದ ಗಡಿ ಭಾಗ ಹಿಂದುಳಿದ ಭಾಗವಾಗಿದ್ದು, ಇಲ್ಲಿಯ ಜನರ ಆಸೆಯಂತೆ ಈಶ್ವರ ಖಂಡ್ರೆ ಅವರಿಗೆ ಉನ್ನತ ಸಚಿವ ಸ್ಥಾನ ನೀಡುವ ಮೂಲಕ ಅಭಿವೃದ್ಧಿಗೆ ಸರಕಾರ ಕೈಜೋಡಿಸಬೇಕು ಎಂದು ಡಾ. ಶಿಂಧೆ ಮನವಿ ಮಾಡಿದ್ದಾರೆ.