ಈಶ್ವರೀಯ ಜ್ಞಾನದಿಂದ ಸತ್ಯ, ಶುದ್ದ ಕಾಯಕ: ಡಾ.ಗುದಗೆ

ಬೀದರ್:ಜೂ.26: ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ತನಗಾದ ಜ್ಞಾನದಿಂದ ನನ್ನ ನಿತ್ಯ ಕಾಯಕದಲ್ಲಿ ಪರಿವರ್ತನೆಯಾಗಿದೆ ಎಂದು ಗುದಗೆ ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕನಿರ್ದೇಶಕ ಡಾ.ಚಂದ್ರಕಾಂತ ಗುದಗೆ ಹೇಳಿದರು.
ಭಾನುವಾರ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದಲ್ಲಿ ಬ್ರಹ್ಮಾಕುಮಾರಿ ಕೇಂದ್ರದ ಪ್ರಥಮ ಮುಖ್ಯಸ್ಥೆಯಾಗಿದ್ದ ಮಾ ಜಗದಂಬಾ ಸರಸ್ವತಿ(ಮಮ್ಮಾ) ಸ್ಮೃತಿ ದಿವಸದಲ್ಲಿ ಕೇಂದ್ರದಿಂದ ಸನ್ಮಾನಿತರಾಗಿ ಅವರು ಮಾತನಾಡಿದರು.
ನಾನು ಬೀದರ್‍ಗೆ ಬಂದು 42 ವರ್ಷ ಗತಿಸಿದೆ. ಪ್ರಾರಂಭದಲ್ಲಿ ನನ್ನ ಕರ್ತವ್ಯದಲ್ಲಿ ಸಾಮಾಜಿಕ ಕಳಕಳಿ ನೆಲೆಸಿರಲಿಲ್ಲ. 1994ರಲ್ಲಿ ಮೌಂಟ್ ಅಬುಗೆ ಹೋಗಿ ಬಂದ ಬಳಿಕ ನನ್ನ ಕರ್ತವ್ಯದಲ್ಲಿ ಭಾರಿ ಬದಲಾವಣೆ ಕಂಡುಕೊಂಡೆ. ಬಡವರು, ದೀನ ದುರ್ಬಲರಿಗೆ ಚಿಕಿತ್ಸಾ ಶುಲ್ಕದಲ್ಲಿ ರಿಯಾಯತಿ ನೀಡುತ್ತ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡೆ. ನನ್ನ ಜೀವನದಲ್ಲಿ ಬದಲಾವಣೆ ಕಾಣಲು ಈಶ್ವರೀಯ ಸೇವಾ ಮನೋಭಾವ ಪ್ರೇರಣೆಯಾಗಿರುವುದರಲ್ಲಿ ಸಂದೇಹವಿಲ್ಲವೆಂದು ಸ್ಪಷ್ಟಪಡಿಸಿದರು.
ವೈದ್ಯಕೀಯ ಸೇವೆ ಅತ್ಯಂತ ಕಠಿಣ ಸೇವೆಯಾಗಿದ್ದು, ಇದರಲ್ಲಿ ಕುಟುಂಬಕ್ಕೆ ಹಾಗೂ ತನಗಾಗಿ ಸಮಯ ಕೊಡಲು ಆಗುವುದಿಲ್ಲವೆಂಬುದನ್ನು ಅರಿತು ನನ್ನ ಎರಡು ಸುಪುತ್ರರಿಗೆ ಇಂಜಿನಿಯರಿಂಗ್ ಮಾಡಲು ತಿಳಿಸಿದೆ. ಆದರೆ ಅವರಿಬ್ಬರು ನನ್ನ ಮಾತನ್ನು ನಯವಾಗಿ ತಿರಸ್ಕರಿಸಿ ಇಬ್ಬರು ವೈದ್ಯಕೀಯ ಸೇವೆಯಲ್ಲಿ ಧುಮುಕಿದ್ದಾರೆ. ನಾನು ಕಲಿಸಿದ ವಿದ್ಯೆ ಹಾಗೂ ನನ್ನ ಧರ್ಮಪತ್ನಿ ನಂದಾ ಗುದಗೆ ಕಲಿಸಿದ ಸಂಸ್ಕಾರದಿಂದಾಗಿ ಇಬ್ಬರು ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡು ತಕ್ಷಣವೇ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ನನ್ನ ಕನಸ್ಸು ನನಸ್ಸು ಮಾಡಿದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪುತ್ರ ಡಾ.ಸಚೀನ ಗುದಗೆ ಸಕ್ಕರೆ ಕಾಯಿಲೆ ಬಗ್ಗೆ ಮಾತನಾಡಿ, ಹಿಂದೆ ಪ್ಲೇಗ್, ಕಾಲರಾ, ಪೆÇೀಲಿಯೋಗಳಂತಹ ರೋಗಗಳು ಮಾರಕವಾಗಿದ್ದವು. ಆದರೆ ಈಗ ಹೃದಯಘಾತ, ಕ್ಯಾನ್ಸರ್‍ನಂತಹ ರೋಗಗಳು ಸಾಮಾನ್ಯವಾಗಿವೆ. ಶೇಕಡಾ 80 ಪ್ರತಿಶತದಷ್ಟು ಜನರಲ್ಲಿ ಈಗ ಸಕ್ಕರೆ ಕಾಯಿಲೆ ಕಂಡು ಬರುತ್ತಿದೆ. ರಕ್ತದೊತ್ತಡ ಹಾಗೂ ಮದುಮೇಹ ಇವು ಚಿಕ್ಕ ವಯಸ್ಸಿನಲ್ಲಿಯೇ ಹೃದಯಘಾತಕ್ಕೆ ಕಾರಣವಾಗುತ್ತವೆ. ಕನಿಷ್ಟ 6ರಿಂದ 8 ಗಂಟೆ ಮಲಗುವುದು, ಕಾಲ ಕಾಲಕ್ಕೆ ಪರಿಕ್ಷೆಗೊಳಪಡುವುದು, ಯೋಗಾಸನ, ವ್ಯಾಯಾಮ, ಯೋಗ, ಧ್ಯಾನ ಮಾಡುವುದರಿಂದ ಸಕ್ಕರೆ ಕಾಯಿಲೆಗೆ ಒಳಗಾದವರೂ ಸಹ ಅದನ್ನು ನಿಯಂತ್ರಿಸಬಹುದಾಗಿದೆ. ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ನಡೆ ಜೊತೆಗೆ ಅಧ್ಯಾತ್ಮಿಕ ಬದುಕು ನಮ್ಮ ಜೀವನ ಸುಂದರವಾಗಿಸುತ್ತದೆ. ಒತ್ತಡದ ಕರ್ತವ್ಯದಲ್ಲಿರುವ ನಮ್ಮಂತಹ ವೈದ್ಯರು ಸಹ ಬ್ರಹ್ಮಾಕುಮಾರಿ ಕೇಂದ್ರದತ್ತ ಮುಖ ಮಾಡಬೇಕಿದೆ ಎಂದರು.
ಖ್ಯಾತ ಹೃದಯರೋಗ ತಜ್ಞ ಡಾ.ನಿತೀನ ಗುದಗೆ ಮಾತನಾಡಿ, ಕಡಿಮೆ ಉಪ್ಪು, ಉಪ್ಪಿನಕಾಯಿಯ ಸೇವನೆ, ಸಕ್ಕರೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಮಿತ ಬಳಿಸುವಿಕೆ, ಧುಮ್ರಪಾನ ಹಾಗೂ ಮಧ್ಯಪಾನ ಸೇವನೆಯಿಂದ ದೂರ ಇರುವುದು, ಕನಿಷ್ಟ 6 ಗಂಟೆಗಳ ಕಾಲ ನಿದ್ದೆ ಮಾಡುವುದು, ಒತ್ತಡ ರಹಿತ ಬದುಕು ಕಟ್ಟಿಕೊಳ್ಳುವಿಕೆ, ಸದಾ ಹಸನ್ಮುಖಿಯಾಗಿರುವುದು, ಮಿತವಾದ ಮೊಬೈಲ್ ಬಳಿಕೆ ಇವು ನಮ್ಮನ್ನು ಹೃದಯ ಸಂಬಂಧಿ ಕಾಯಿಲೆಯಿಂದ ದೂರವಾಗಿಸುತ್ತದೆ ಎಂದು ತಿಳಿಸಿದರು.
ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಮಾ ಜಗದಂಬಾ ಸರಸ್ವತಿ ಅವರ ಸಂದೇಶ ಹಾಗೂ ನೈತಿಕ ಜೀವನದ ಮೇಲೆ ಬೆಳಕು ಚಲ್ಲಿದರು. ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಮಮ್ಮಾ ಅವರ ಜೀವನ ವಿವರಿಸಿದರು. ಶೀತಲ ಪಾಂಚಾಳ ಮಮ್ಮಾ ಅವರ ಮೇಲೆ ಗೀತ ಗಾಯನ ಪ್ರಸ್ತುತಪಡಿಸಿದರು. ಬಿ.ಕೆ ಪ್ರಭಾಕರ ಭಾಯಿ ಹಾಗೂ ನಂದಾ ಗುದಗೆ ವೇದಿಕೆ ಮೇಲಿದ್ದರು. ಕೇಂದ್ರದ ಸಹೋದರ, ಸಹೋದರಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಮಮ್ಮಾ ಅವರಿಗೆ ಪುಷ್ಪನಮನ ಅರ್ಪಿಸಿ, ಬ್ರಹ್ಮಾ ಭೋಜನ ಸವಿದು ಪುನಿತರಾದರು.