
ಬೀದರ್:ಮಾ.5:ಮೂರುವರೆ ದಶಕದಿಂದ ಸಾರ್ವಜನಿಕ ಜೀವನದಲ್ಲಿರುವ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಅವರಿಗೆ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ವಿವಿಧ ಸಮಾಜಗಳ ಪ್ರಮುಖರು, ಗಣ್ಯರು ಬಿಜೆಪಿ ನಾಯಕತ್ವವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗಣ್ಯರು, ಈಶ್ವರಸಿಂಗ್ ಠಾಕೂರ್ ಅವರ ಸೇವೆಯನ್ನು ಕೊಂಡಾಡಿದರು. ಯಾವುದೇ ಫಲಾಫಲದ ಆಪೇಕ್ಷೆ ಇಲ್ಲದೆ ಈಶ್ವರಸಿಂಗ್ ಅವರು ಹಿಂದೂ ಸಮಾಜಕ್ಕಾಗಿ ಹೋರಾಡುತ್ತಿದ್ದಾರೆ. ಧಾರ್ಮಿಕ ಸ್ಥಳಗಳ ಸಂರಕ್ಷಣೆಗಾಗಿ ಲಾಠಿಏಟು ತಿಂದಿದ್ದಾರೆ. ಬೀದರಿಗಾಗಿ, ಬೀದರಿನ ಜನತೆಗಾಗಿ ಶ್ರಮಿಸುತ್ತಿರುವ ಈಶ್ವರಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಈಶ್ವರಸಿಂಗ್ ಅವರಲ್ಲಿನ ರಾಷ್ಟ್ರಪ್ರೇಮ ಅನುಕರಣೀಯ ಎಂದರು.
ಬಿಜೆಪಿ ಕಲಬುರ್ಗಿ ವಿಭಾಗ ಸಹಪ್ರಮುಖರೂ ಆಗಿರುವ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಜನರ, ಧರ್ಮ, ರಾಷ್ಟ್ರದ ಸೇವೆಯೇ ಬದುಕಿನ ಉದ್ದೇಶವಾಗಿದೆ ಎಂದರು.
ನಾನು ಯಾವತ್ತೂ ಜನರ ಮಧ್ಯೆ ಇರುವಾತ. ಪಕ್ಷ ಅವಕಾಶ ನೀಡಿದ್ದಲ್ಲಿ ದಿನದ 24 ತಾಸು ಜನರಿಗಾಗಿ ಶ್ರಮಿಸುತ್ತೇನೆ ಎಂದರು. ಜಾತಿ ಮತಗಳ ಭೇದ ಎಂದೂ ಮಾಡಿಲ್ಲ. ಎಲ್ಲರೂ ಒಂದಾಗಿ ಬೀದರಿನ ಅಭಿವೃದ್ಧಿಗಾಗಿ, ಬೀದರಿನ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸಬೇಕಾದ ಅಗತ್ಯ ಇದೆ ಎಂದರು.
ಪ್ರವಾಸೋದ್ಯಮವನ್ನು ಬೀದರಿನ ಅಭಿವೃದ್ದಿಗಾಗಿ ಬಳಸಿಕೊಳ್ಳಲು ವಿಪುಲ ಅವಕಾಶಗಳಿವೆ. ಪ್ರಸಿದ್ಧ ನರಸಿಂಹ ಝರಣಿ ಕ್ಷೇತ್ರ, ಶುಕ್ಲತೀರ್ಥ, ಪಾಪವಿನಾಶ ಕ್ಷೇತ್ರಗಳನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿಪಡಿಸಬಹುದು. ಪ್ರಸಿದ್ಧ ಗುರುನಾನಕ ಝೀರಾ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದೆ ಎಂದು ಈಶ್ವರಸಿಂಗ್ ಹೇಳಿದರು.
ನನು ಮೂರುವರೆ ದಶಕರಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಸಮಾಜದ ಕೆಲಸಕ್ಕೆ ಸದಾ ಮುಂದಿರುತ್ತೇನೆ. ಉಸಿರು ಇರುವವರೆಗೆ ಬೀದರಿನ ಜನತೆಗಾಗಿ ಶ್ರಮಿಸುತ್ತೇನೆ ಎಂದರು.
ರಾಷ್ಟ್ರಹಿತ, ಜನಹಿತಕ್ಕಾಗಿ ದುಡಿಯುವುದೇ ಬದುಕಿನ ಉದ್ದೇಶವಾಗಿದೆ ಎಂದರು. ಜಾತಿಮತಗಳ ಭೇದ ಇಲ್ಲದೆ, ವಿವಿಧ ಸಮಾಜಗಳ ಹಿರಿಯರು, ಗಣ್ಯರು, ಪ್ರಮುಖರು ಸೇರಿ ಈ ಸಭೆ ಆಯೋಜಿಸಿರುವುದು ಸಂತಸವುಂಟು ಮಾಡಿದೆ. ಎಲ್ಲರೂ ಒಂದಾಗಿ ನವ ಬೀದರಿನ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದು ಈಶ್ವರಸಿಂಗ್ ಹೇಳಿದರು.
ನಗರದ ಎಸ್‍ಆರ್‍ಎಸ್ ಫಂಕ್ಷನ್ ಹಾಲ್‍ನಲ್ಲಿ ನಡೆದ ಈ ಸಭೆಯಲ್ಲಿ ಪ್ರಮುಖರಾದ ಕಾಶಿನಾಥ ಪಾಟೀಲ್, ಡಾ. ಉಪ್ಪೆ, ನಿವೃತ್ತ ಪ್ರಾಚಾರ್ಯ ಬಸವರಾಜ ಚಿಕಲೆ, ಎಂಜಿನೀಯರ್ ರವಿ ಪುಣ್ಯಶೆಟ್ಟಿ, ಹಿರಿಯ ನ್ಯಾಯವಾದಿ ಶ್ರಿಕಾಂತ ದೇಶಪಾಂಡೆ, ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ್, ಡಾ. ಸುರೇಂದ್ರ ರೋಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.