ಈಶ್ವರಪ್ಪ ಹಿಂದೆ ಸರಿಯುತ್ತಾರೆ ಅಶ್ವಥ್ ನಾರಾಯಣ ವಿಶ್ವಾಸ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ಚುನಾವಣೆ ಅಂದ ಮೇಲೆ ಕೆಲವರು ಟಿಕೇಟ್ ತಪ್ಪಿಸುವುದು, ವಿರೋಧಿಸುವುದು ಸಹಜ. ಅಂತೆಯೇ ಈಶ್ವರಪ್ಪ ಅವರಿಗೂ ಬೇಸರ ಆಗಿರಬಹುದು. ಆದರೆ, ಅವರು ಮರಳಿ ಪಕ್ಷ ಸೇರುವರು ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಅವರು ಈಶ್ವರಪ್ಪನವರ ನಿರ್ಣಯ ಕುರಿತು ಪ್ರತಿಕ್ರಯಿಸಿದ್ದು ಹೀಗೆ, ಪಕ್ಷದಲ್ಲಿನ ಅಪಸ್ವರ ಸರಿಯಲ್ಲ.
ಚುನಾವಣೆ ವೇಳೆ ಪರಸ್ಪರ ಟೀಕೆ ಪ್ರತಿಟೀಕೆ ಸಹಜ. ಈಶ್ವರಪ್ಪ ಅವರಿಗೆ ಮನವರಿಕೆ ಆಗಿ ತಮ್ಮ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳುವರೆಂಬ ನಂಬಿಕೆಯಿದೆ ಎಂದರು.
ಈಶ್ವರಪ್ಪ ಪುತ್ರನಿಗೆ ಟಿಕೇಟ್ ಅನ್ನು ಬೇಡ ಅಂತ ಯಾರು ಹೇಳಿಲ್ಲ. ಹಿಂದೆ ಯಡಿಯೂರಪ್ಪ ಅವರ ಮಗನಿಗೂ ವರುಣದಲ್ಲಿ ಸ್ಪರ್ಧಿಸೋಕೆ ಆಗಿರಲಿಲ್ಲ. ಅಂದಿನಿಂದಲೂ ವಿಜಯೇಂದ್ರರವರು ಕಾದ ಬಳಿಕ ಕೊನೆಗೆ ಒಂದು ಒಳ್ಳೆ ಅವಕಾಶ ಈಗ ಸಿಕ್ಕಿದೆ. ಹೀಗೆ ಎಲ್ಲೂ ಸಹ ಯಾರು ದುಡುಕಬಾರದು. ಪಕ್ಷ ನಮ್ಮ ತಾಯಿ ಇದ್ದಂತೆ ಪ್ರೀತಿಸಿ, ಗೌರವಿಸುವುದು ನಮ್ಮ ಕರ್ತವ್ಯ. ಯಾವುದೇ ರಾಜಕೀಯ ಪಕ್ಷ ಸ್ಥಾಪನೆಯಾಗಿರುವುದು ನಮಗೋಸ್ಕರ ಅಲ್ಲ, ಇಡೀ ದೇಶ ಸಮಾಜಕ್ಕೋಸ್ಕರವಾಗಿದೆ. ಮುಂದೆ ನಮಗೂ ನಾಯಕತ್ವ, ಜವಾಬ್ದಾರಿ ಸಿಗುತ್ತದೆ.
ಸಿಕ್ಕಿದಾಗ ನಾವು ಜನಪರ ಕೆಲಸ ಮಾಡಬೇಕು. ಸಿಕ್ಕಿಲ್ಲದಿದ್ದಾಗ ಕೋಪ ಮತ್ತು ಆಕ್ರೋಶಕ್ಕೆ ಒಳಗಾಗುವ ಕೆಲಸ ಯಾರು ಕೂಡ ಮಾಡಬಾರದು ಎಂದು ಹೇಳಿದರು.
ಪಕ್ಷದೊಳಗಿನ ಇಂತಹ ಬೆಳವಣಿಗೆ ನೋಡಿದರೆ ಜನರು ಏನು ಹೇಳುತ್ತಾರೆ, ಜನರಿಗೆ ಉತ್ತರ ಕೊಡೋಕೆ ಆಗುತ್ತದೆ. ನಮಗೋಸ್ಕರ ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡುತ್ತಾ ಇರುತ್ತಾರೆ. ಅವರಿಗೆ ಏನು ಕೊಟ್ಟಿರಿವುದಿಲ್ಲ ಅವರು ಏನು ಹೇಳಬೇಕು. ಅವಕಾಶ ಸಿಕ್ಕಿರೋರೆ ಈ ರೀತಿ ಕೋಪಗೊಳ್ಳುವುದು. ಅಂತಹವರನ್ನು ಯಾರು ಸಹ ಸಮರ್ಥಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಅವರು ಎಲ್ಲಿ ಇದ್ದಾರೆ ಅಂತ ಹುಡುಕಬೇಕು ಎಂಬಂತಾಗಿದೆ. ಆ ರೀತಿ ಅವರ ಧ್ವನಿ, ಕೆಲಸ ಹಾಗೂ ಅಭಿವೃದ್ಧಿ ಕಾಣುತ್ತ ಇಲ್ಲ. ಬರೀ ರಾಜಕೀಯ ಪ್ರೇರಿತ ಹೇಳಿಕೆ ಬಿಟ್ಟರೆ ಇನ್ನೂ ಏನು ಇಲ್ಲ. ಬರಿ ಖಾಲಿ ಶಬ್ಧ ಮಾಡಿದ್ದು ಬಿಟ್ಟರೆ ಜನಪರ ಕೆಲಸ ಆಡಳಿತ ಎನ್ನುವುದು ಈ ರಾಜ್ಯದಲ್ಲಿ ಕಾಣಿಸುತ್ತ ಇಲ್ಲ. ಆ ಕಾರಣದಿಂದ ಈ ಸರ್ಕಾರವೂ ಯಾವ ದಿಕ್ಕಿನಲ್ಲಿಯೂ ಪರಿಣಾಮಕಾರಿಯಾಗಿ ಇಲ್ಲ. ಅವರ ಮಂತ್ರಿ ಮಂಡಲ ಅಲ್ಲಿ ಇರುವವರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ನೇರವಾಗಿ ಹೇಳುತ್ತಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಇರಬೇಕು. ನಾನು ಶಾಸಕನಾಗಿ ಇರಬೇಕು. ಸಚಿವನಾಗಿ ಇರಬೇಕೆನ್ನುತ್ತಾ ಅವರ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇರುತ್ತಾರೆಂದರು.
ಕೆಲವೊಂದು ಮೂರು, ನಾಲ್ಕು ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಾ ಇದೆ. ಸ್ವಲ್ಪ ಗೊಂದಲ ಮತ್ತು ವಿರೋಧ ಬರುತ್ತದೆ. ಆದರೆ, 28ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಎದುರಿಸುತ್ತೇವೆ. ಒಟ್ಟು 28 ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದಲ್ಲಿ ಗೆಲ್ಲುವುದೇ ನಮ್ಮ ಗುರಿಯೆಂದರು. ಯಡಿಯೂರಪ್ಪ ಅವರು ನಮ್ಮ ಹಿರಿಯ ನಾಯಕರು, ಪಾರ್ಲಿಮೆಂಟ್ ಸದಸ್ಯರು ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸೂಕ್ತ ಎಂಬುವುದು ಅವರಿಗೆ ತಿಳಿದಿದೆ. ಎಲ್ಲಾ ಅಭ್ಯರ್ಥಿಗಳು ಪರಸ್ಪರ ಒಗ್ಗಟಾಗಿದ್ದು ಯಾರು ಯಾರ ಮೇಲೆ ಬರಲು ತೋರಿಸದ ರೀತಿಯಲ್ಲಿ ಪಕ್ಷವು ನಿರ್ಣಯ ಕೈ ಗೊಂಡಿದೆ ಎಂದರು.