ಈಶ್ವರಪ್ಪ ವಜಾಕ್ಕೆ ಡಿಕೆಶಿ ಆಗ್ರಹ

ಮಂಗಳೂರು,ಏ.೩- ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಮತ್ತು ಪಕ್ಷದ ವರಿಷ್ಠರಿಗೆ ದೂರು ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವ ಈಶ್ವರಪ್ಪ ಅವರನ್ನು ಇಂದು ಸಂಜೆಯೊಳಗೆ ಸಚಿವ ಸ್ಥಾನದಿಂದ ವಜಾಮಾಡಬೇಕು ಇಲ್ಲವೆ ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಕೇರಳದ ಕಾಸರಗೋಡಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಂಗಳೂರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅವರು ಬರೆದಿರುವ ಪತ್ರ ಕೇವಲ ಪತ್ರವಲ್ಲ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ ಎಂದರು.
ರಾಜ್ಯಪಾಲರಿಗೆ ಪತ್ರ ಬರೆದಿರುವ ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಚಿವರುಗಳಿಗೆ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ತೋರಿರುವ ಸಚಿವ ಈಶ್ವರಪ್ಪ ಅವರು ಯಡಿಯೂರಪ್ಪ ಅವರು ವಜಾ ಮಾಡಬೇಕು. ಇಲ್ಲದಿದ್ದರೆ ತಾವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಹೇಳಿದರು.