ಈಶ್ವರಪ್ಪ ಬಿಜೆಪಿಯ ಡಮ್ಮಿ ಕ್ಯಾಂಡಿಡೇಟ್ :ಆಯನೂರು ಮಂಜುನಾಥ 

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಮಾ.25: ಬಿಜೆಪಿ ಪಕ್ಷದ ಹೊಂದಾಣಿಕೆಯ ಡಮ್ಮಿ ಕ್ಯಾಂಡಿಡೇಟ್ ಆಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ ಈಶ್ವರಪ್ಪ, ಬಿಜೆಪಿಯ ನಡುವೆ ಒಳ ಒಪ್ಪಂದವಾಗಿದೆ ಎಂಬ ಬಾಂಬನ್ನು  ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಈಶ್ವರಪ್ಪ ವಿರುದ್ಧ ಸಿಡಿಸಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಸ್ಪರ್ಧಿಸುವ ಮೂಲಕ ರಾಘವೇಂದ್ರ ಅವರನ್ನು ಗೆಲ್ಲಿಸುವ ಒಳ ಒಪ್ಪಂದವಿದೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪ ಅವರನ್ನು ರಾಜ್ಯಪಾಲರನ್ನಾಗಿಸುವ ಮತ್ತು ಪುತ್ರ ಕಾಂತೇಶ್ ಗೆ ಎಂಎಲ್ ಸಿ ಸ್ಥಾನ ಲಭಿಸುವ ಸಾಧ್ಯತೆ ಇದೆ ಎಂದರು.ಬಿಜೆಪಿ ಮುಂದುವರೆಯುವ ಜಾತಿಗಳ ಮತ ಪಡೆದು ಹಿಂದುಳಿದ ಜಾತಿಗಳನ್ನ ಒಡೆಯುವ ತಂತ್ರ ಇದರಲ್ಲಿದೆ. ಈಶ್ವರಪ್ಪ  ಬಿಜೆಪಿಯ ಒಳ ಒಪ್ಪಂದದ ಪ್ರಕಾರ ಕೆಲಸ ಮಾಡದಿದ್ದರೆ ಐಟಿ, ಇಡಿ ಅಧಿಕಾರಿಗಳು ಅವರ ಮನೆಯಲ್ಲಿರುತ್ತಾರೆ. ಮುಂದೆ ಅಧಿಕಾರದ ಆಸೆ ತೋರಿಸಿ, ಹಿಂದಿನಿAದ ಇಡಿ, ಐಟಿ ಬಿಡುವ ಬೆದರಿಕೆ ಹಾಕಿದ್ದಾರೆ ಎಂದರು.ಬಡವರು, ದಿನದಲಿತರು ಹಿಂದುಳಿದ ವರ್ಗದವರು ಇದಕ್ಕೆ ಮರಳಾಗುವುದಿಲ್ಲ .ನಾನೊಬ್ಬ ಹಿಂದುಳಿದ ವರ್ಗದ ನಾಯಕ ಅಂತಾ ಬಿಂಬಿಸಿಕೊಳ್ಳುವ ಪ್ರಯತ್ನ ಈಶ್ವರಪ್ಪ ಮಾಡುತ್ತಿದ್ದಾರೆ. ಕೂಲಿಕಾರ್ಮಿಕರ ವಿರೋಧಿ ಇವರು ಎಂದು , ಪುರಲೆಯಲ್ಲಿ ಈಶ್ವರಪ್ಪನವರ ಬೆನ್ನಿಗೆ ನಾನು ನಿಂತು ಪ್ರಚಾರ ಮಾಡಿದ ಕಾರಣದಿಂದ ಪುರಲೆಯಲ್ಲಿ ೧೯೮೯ ರಲ್ಲಿ ಅವರಿಗೆ ಲಿಂಗಾಯಿತ ಮುಖವಾಡ ಹಾಕಿದ್ದರಿಂದ ಸಾವಿರಾರು ಮತಗಳು ಬಂದಿದೆ. ಆಗಾಗಿ ಅಲ್ಲಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ ಎಂದರು.ಹಿಂದುಳಿದ ವರ್ಗದ ಮುಖವಾಡ ಹಾಕಿಕೊಂಡಿದ್ದಾರೆ ಇವರು ಬಿಜೆಪಿಯನ್ನು ಗೆಲ್ಲಿಸಿ ಕೊಡುವ ಬಗ್ಗೆ ಒಪ್ಪಂದವಾಗಿದೆ. ಒಂದು ಕಡೆ ಯಡಿಯೂರಪ್ಪ ರವರಿಗೆ ಬೈಯ್ಯುವುದು, ಒಂದು ಕಡೆ ಮೋದಿಯನ್ನು ಹೊಗಳುವುದರ ಮೂಲಕ ನಾಟಕವಾಡುತ್ತಿದ್ದಾರೆ . ಈಶ್ವರಪ್ಪ ನಾಟಕದ ತಂತ್ರಗಾರಿಕೆ ನಡೆಯುವುದಿಲ್ಲ. ನಾಲಿಗೆಗೆ ಬಣ್ಣ ಹಚ್ಚಿಕೊಂಡಿರುವ ರಾಜಕಾರಣಿ ಎಂದು ಟೀಕಿಸಿದರು.ನಾವೆಲ್ಲ ಒಂದೇ ಗರಡಿಯಲ್ಲಿ ಪಳಗಿದವರು. ಇವರ ತಂತ್ರವನ್ನು  ಅವರ ಜೊತೆಯಲ್ಲಿರುವವರು ನನಗೆ ಹೇಳಿದ್ದಾರೆ. ಬಿಜೆಪಿ ಸ್ಪಾನ್ಸರ್ಡ್ ಕ್ಯಾಂಡಿಡೇಟ್ ಈಶ್ವರಪ್ಪ ಆಗಿದ್ದಾರೆ. ಕ್ಯಾಂಡಿಡೇಟ್ ಈಶ್ವರಪ್ಪ ಇವರು ನಾನು ಗೌರ್ನರ್ ಆಗುತ್ತೇನೆ. ಮಗ ಕಾಂತೇಶ್ ಎಂಎಲ್ಸಿ ಆಗುತ್ತಾನೆ ಎಂದು  ಸ್ಪರ್ಧೆ ಮಾಡಿ ಓಡಾಡುತ್ತಿದ್ದಾರೆ. ಇವರೇನಾದರೂ ಗೌರ್ನರ್ ಆದರೆ ಸಂವಿಧಾನವನ್ನೇ ಹಾಳುಗೆಡಹುತ್ತ್ತಾರೆ ಎಂದು ವ್ಯಂಗ್ಯ ಮಾಡಿದರು.ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ ಹಿಂದುತ್ವದ ಹೆಸರಿನಲ್ಲಿ ಹಣ ಸಂಗ್ರಹಿಸಿದಾಗ ಹಣ ಯಾವ ಟ್ರಸ್ಟ್ಗೆ ಹೋಯಿತು. ಟ್ರಸ್ಟ್ನ ಇಓ ಯಾರಿದ್ದಾರೆ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಇವರು ಈ ಬಾರಿ ದಿ. ಬಂಗಾರಪ್ಪರವರ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಗ್ಯಾರಂಟಿ ಎಂದರು.