ಈಶ್ವರಪ್ಪ ಬಂಡಾಯ ಶಮನ: ಜೋಶಿ

ಹುಬ್ಬಳ್ಳಿ, ಮಾ 17: ಈಶ್ವರಪ್ಪ ಬಂಡಾಯ ಶಮನ ಆಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ನಾಳೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಬರಬಹುದು ಎಂದರು.

ಈಶ್ವರಪ್ಪ ಮನವೊಲಿಕೆ ಮಾಡುವುದಕ್ಕೆ ಬಹಳ ಸಮಯ ಇದೆ. ಚುನಾವಣೆಗೆ ಇನ್ನು 40 ದಿನ ಇದೆ. ನಾಮಪತ್ರ ಸಲ್ಲಿಕೆಗೆ 20 ದಿನ ಬಾಕಿ ಇದೆ. ಅಷ್ಟರಲ್ಲಿ ನಾವೆಲ್ಲ ಸರಿ ಮಾಡುತ್ತೇವೆ ಎಂದು ಜೋಶಿ ಹೇಳಿದರು.

ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ. ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದು ಜೋಶಿ ತಿಳಿಸಿದರು.

ಕುಮಾರಸ್ವಾಮಿ ಮೂರು ಸ್ಥಾನ ಕೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅವರು ಕೇಳುವುದು ಸಹಜ. ಅಲ್ಲಿ ಏನು ಚರ್ಚೆ ಆಗಿದೆ ಎನ್ನುವುದು ಗೊತ್ತಾಗಿಲ್ಲ. ನಾನು ಕುಮಾರಸ್ವಾಮಿ ಅವರ ಜೊತೆ ಮಾತನಾಡಿಲ್ಲ ಎಂದು ಜೋಶಿ ತಿಳಿಸಿದರು.

ನಾನು ಅಧಿಕೃತವಾಗಿ ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇಂದು ಬೊಮ್ಮಾಯಿಯವರು ನಾವು ಸಭೆ ಮಾಡುತ್ತಿದ್ದೇವೆ. ಮುಂಬೈ ಕರ್ನಾಟಕದಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು ಎಂದವರು ನುಡಿದರು.