ಈಶ್ವರಪ್ಪ ದೂರು ಮೌನ ವಹಿಸಿದ ಬಿಎಸ್‌ವೈ

ಬೆಂಗಳೂರು, ಏ.೪- ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ, ವರಿಷ್ಠರಿಗೆ ದೂರು ನೀಡಿದ ನಂತರ ಮೌನಕ್ಕೆ ಶರಣಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪನವರ ದೂರಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ದಾವಣಗೆರೆಗೆ ತೆರಳುವ ಮುನ್ನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರು ಈಶ್ವರಪ್ಪನವರ ದೂರಿನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಬಯಸಿದ್ದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು.
ಸಚಿವ ಈಶ್ವರಪ್ಪ ಅವರು ತಮ್ಮ ವಿರುದ್ಧ ದೂರು ನೀಡಿ ಅನುದಾನ ಹಂಚಿಕೆ ಸಂಬಂಧ ಆರೋಪಗಳನ್ನು ಮಾಡಿದ್ದರೂ ಅದು ಏಕೋ ಏನೋ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಯಾವುದೇ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.
ಸಚಿವ ಈಶ್ವರಪ್ಪರವರ ದೂರಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಸಚಿವರು ಹಾಗೂ ಶಾಸಕರು ತಿರುಗಿ ಬಿದ್ದು, ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದರು. ಆದರೆ, ಯಡಿಯೂರಪ್ಪ ಅವರು ಮಾತ್ರ ಇದುವರೆಗೂ ಈಶ್ವರಪ್ಪರವರ ದೂರಿನ ಬಗ್ಗೆ ಎಲ್ಲೂ ತುಟಿ ಬಿಚ್ಚದೆ ಮೌನ ವಹಿಸಿದ್ದಾರೆ.