ಈಶ್ವರಪ್ಪಗೆ ಮಂತ್ರಿ ಸ್ಥಾನ ನೀಡಲು ಕುರುಬ ಮುಖಂಡರ ಆಗ್ರಹ

ಬೆಂಗಳೂರು, ನ. ೯- ವಿಧಾನಪರಿಷತ್‌ನ ಹಂಗಾಮಿ ಸಭಾಪತಿಯಾಗಿರುವ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಸಭಾಪತಿಯಾಗಿ ಮುಂದುವರೆಸಬೇಕು ಮತ್ತು ಮಾಜಿ ಸಚಿವ ಈಶ್ವರಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕುರುಬ ಸಮಾಜದ ಮುಖಂಡರುಗಳು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಕುರುಬ ಸಮಾಜದ ಮುಖಂಡರಾದ ಕೆ. ಮುಕುಡಪ್ಪ, ಕೆ. ವಿರೂಪಾಕ್ಷಪ್ಪ, ಟಿ.ವಿ. ಬೆಳಗಾವಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ ಇವರುಗಳು, ಸಾಂವಿಧಾನಿಕ ಹುದ್ದೆಗಳಾದ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಸಭಾಪತಿ ಸ್ಥಾನಗಳು ಇವರೆಗೂ ಕುರುಬ ಸಮಾಜದ ಯಾರೊಬ್ಬ ಮುಖಂಡರಿಗೂ ಸಿಕ್ಕಿಲ್ಲ. ಹಾಗಾಗಿ ಪ್ರಸ್ತುತ ಪರಿಷತ್‌ನ ಹಂಗಾಮಿ ಸಭಾಪತಿಯಾಗಿರುವ ರಘುನಾಥ್ ರಾವ್ ಮಲ್ಕಾಪುರೆ ಅವರ ಸದಸ್ಯತ್ವ ಅವಧಿ ಮುಗಿಯುವವರೆಗೂ ಸಭಾಪತಿಯಾಗಿ ಮುಂದುವರೆಸಬೇಕು ಎಂದು ಮುಂತ್ರಿಗಳಿಗೆ ಮನವಿ ಮಾಡಿದರು.
ಹಾಗೆಯೇ ಕುರುಬ ಸಮಾಜದ ಹಿರಿಯ ನಾಯಕರುಗಳಲ್ಲಿ ಒಬ್ಬರಾದ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಹೊರಿಸಲಾದ ಆರೋಪ ನಿರಾಧಾರವಾಗಿರುವುದರಿಂದ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕುರುಬ ಸಮಾಜದ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಇವರುಗಳು ಎಚ್ಚರಿಕೆ ನೀಡಿದರು.
ಪ್ರಧಾನಿ ಮೋದಿ ಅವರು ಈ ತಿಂಗಳ ೧೧ ರಂದು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ್ಕಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಅಂದೇ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಇರುವುದರಿಂದ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪ್ರಧಾನಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಬೇಕು ಎಂಬುದು ರಾಜ್ಯದ ಸಮಸ್ತ ಕುರುಬ ಸಮಾಜದ ಬಯಕೆಯಾಗಿದೆ. ಈ ಕಾರ್ಯಕ್ಕೆ ಪ್ರಧಾನಿಗಳನ್ನು ಒಪ್ಪಿಸಿ ಕರೆತಂದು ಸಂತ ಕವಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಬೇಕು ಎಂದು ಇವರುಗಳು ಮನವಿ ಮಾಡಿದ್ದಾರೆ.