ಈಶಾನ್ಯ ಸಾರಿಗೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಕಲಬುರಗಿ:ಏ.01:ರಾಜ್ಯವ್ಯಾಪಿ ಕರೆಯ ಮೇರೆಗೆ ಗುರುವಾರ ನಗರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ್ ಅವರ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.
ರಾಜ್ಯ ಸಾರಿಗೆ ನೌಕರರು ಆರನೇ ವೇತನ ಆಯೋಗದ ವೇತನ ಜಾರಿಗೊಳಿಸುವಂತೆ, ನೌಕರರಿಗೆ ಕಿರುಕುಳ ತಪ್ಪಿಸುವಂತೆ, ವೈದ್ಯಕೀಯ ಭತ್ಯೆ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಹೋರಾಟದ ನೇತೃತ್ವ ವಹಿಸಿದ್ದ ಸಾರಿಗೆ ನೌಕರರ ಒಕ್ಕೂಟದ ಚಂದ್ರಶೇಖರ್ ಎಸ್. ಹಿರೇಮಠ್ ಅವರು ಮಾತನಾಡಿ, ರಾಜ್ಯ ಸರ್ಕಾರ ಈ ಮೊದಲು ತಾನು ಕೊಟ್ಟ ಭರವಸೆಯಂತೆ ಮುಷ್ಕರದ ಮೊದಲು ಆರನೇ ವೇತನ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನೌಕರರ ಮುಷ್ಕರದಿಂದ ಏಪ್ರಿಲ್ 7ರಿಂದ ತೊಂದರೆಯಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ ಅವರು, ಸರ್ಕಾರಿ ನೌಕರರಿಗೆ ಈಗಾಗಲೇ ಏಳನೇ ವೇತನ ಆಯೋಗದ ಶ್ರೇಣಿಯನ್ನು ಪಾವತಿಸುತ್ತಿದ್ದು, 8ನೇ ವೇತನ ಆಯೋಗದ ಶ್ರೇಣಿಯನ್ನು ನೀಡುವ ದಿಸೆಯಲ್ಲಿ ಜಾರಿಯಲ್ಲಿದೆ. ಆದಾಗ್ಯೂ, ಸಾರಿಗೆ ನೌಕರರಿಗೆ ಆರನೇ ವೇತನ ನೀಡಲು ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಹೋರಾಟದಲ್ಲಿ ಜಯರಾಮ್ ರಾಠೋಡ್, ಶಿವಕುಮಾರ್ ರುದ್ರಗೌಡ, ಉದಯಕುಮಾರ್, ಶಿವಲಿಂಗ್, ಮಲ್ಲಿಕಾರ್ಜುನ್ ಹಿರೇಮಠ್, ಸಿದ್ದಣಗೌಡ, ಶಾಂತಪ್ಪ, ಶಂಕರ್ ಮುಂತಾದವರು ಉಪಸ್ಥಿತರಿದ್ದರು.