ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಹಿನ್ನೆಲೆ: ಗುಲಬರ್ಗಾ ವಿಶ್ವವಿದ್ಯಾಲಯದ ಸುತ್ತ ನಿಷೇಧಾಜ್ಞೆ

ಕಲಬುರಗಿ.ನ.1:ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ನವೆಂಬರ್ 2ರ‌ ಬದಲಾಗಿ ನವೆಂಬರ್ 10 ಕ್ಕೆ ಮುಂದೂಡಿರುವುದರಿಂದ ಅಂದು ಕಲಬುರಗಿ ವಿಶ್ವವಿದ್ಯಾಲಯದ ಸುತ್ತಲು ಹಾಗೂ ಮತ ಎಣಿಕೆ ಕೇಂದ್ರದ ಒಳಗಡೆ ಇಂಕ್ ಪೆನ್/ಸ್ಕೆಚ್ ಪೆನ್, ಹರಿತವಾದ ಆಯುಧ, ಸ್ಪೋಟಕ ವಸ್ತುಗಳು, ಮೊಬೈಲ್, ಸಿಗರೇಟ್, ಗುಟಕಾ ಮತ್ತು ನೀರಿನ ಬಾಟಲ್‍ಗಳನ್ನು ತರುವುದನ್ನು ಸಿ.ಆರ್.ಪಿ.ಸಿ ಕಾಯ್ದೆ ಕಲಂ 144 ರನ್ವಯ ನಿಷೇಧಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ಇದಲ್ಲದೆ ನವೆಂಬರ್ 10 ರಂದು ಕಲಬುರಗಿ ನಗರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ದಿನಾಂಕ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯ ರಾತ್ರಿ ವರೆಗೆ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರನ್ವಯ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಆದೇಶ ವಾಪಸ್: ಈ ಹಿಂದೆ ನಿಗದಿಯಂತೆ ನವೆಂಬರ್ 2 ಕ್ಕೆ ಮತ ಎಣಿಕೆ ಕಾರಣ ಅಂದು ಗುಲಬರ್ಗಾ ವಿಶ್ವವಿದ್ಯಾಲಯದ ಸುತ್ತಮುತ್ತ 144 ಸಿ.ಆರ್.ಪಿ.ಸಿ. ನಿಷೇಧಾಜ್ಞೆ ಹಾಗೂ ನವೆಂಬರ್ 1ರ ಮಧ್ಯರಾತ್ರಿಯಿಂದ ನವೆಂಬರ್ 2ರ ಮಧ್ಯರಾತ್ರಿ ವರೆಗೆ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಿ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.