ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ:ಬಿರುಸಿನ ಮತದಾನ

ಕಲಬುರಗಿ,ಜೂ 3: ಇಂದು ನಡೆಯುತ್ತಿರುವ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಶೇಕಡ 26 ರಷ್ಟು ಮತದಾನವಾಗಿದೆ.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರು ಕಲಬುರಗಿ ನಗರದ ಹಳೆಯ ಎಸ್.ಪಿ. ಕಚೇರಿ ಎದುರಿರುವ ಸರ್ಕಾರಿ ಬಾಲಕಿಯರ ಜ್ಯೂನಿಯರ್ ಕಾಲೇಜು ಮತಗಟ್ಟೆ ಸಂಖ್ಯೆ 26ರಲ್ಲಿ ಮತ ಚಲಾಯಿಸಿದರು.
ಕಲಬುರಗಿ ಜಿಲ್ಲೆಯ ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂಖ್ಯೆ 33ರಲ್ಲಿ ಹಿರಿಯ ಜೀವಿ ನಿವೃತ್ತ ಶಿಕ್ಷಕ ಪುಂಡಲಿಕಪ್ಪ ಚಿರಡೆ ( 87) ಮತದಾನ ಮಾಡಿದರು.
ಇಳಿ ವಯಸ್ಸಿನಲ್ಲಿಯೂ ಇಂದು ಮತಗಟ್ಟೆಗೆ ಬಂದು ಮತ ಚಲಾಯಿಸಿರುವೆ. ಮತ ಮೌಲ್ಯವಾದರೆ ಅದೇ ನನಗೆ ಸಂತೋಷ. ದೇಶ ನಮಗೆಲ್ಲ ಸಾಕಷ್ಟು ನೀಡಿದೆ. ಪ್ರಜ್ಞಾವಂತ ಮತದಾರರಾದ ನಾವು ನಮ್ಮ ಹಕ್ಕು ಚಲಾಯಿಸಲು ಮರೆಯಬಾರದು ಎಂದರು