ಈಶಾನ್ಯ ಪದವೀಧರ ಕ್ಷೇತ್ರದಲ್ಲಿಕಾಂಗ್ರೆಸ್ ಬಿಜೆಪಿಗೆ ಪ್ರಭಲ ಪೈಪೋಟಿಯ ಪ್ರತಾಪ್ ರೆಡ್ಡಿ


ಎನ್.ವೀರಭದ್ರಗೌಡ
* ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿ
* ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ಪ ಮತಗಳ ಅಂತರದಿಂದ ಸೋಲು
* ಮತದಾರರ ನೋಂದಣಿಯಲ್ಲಿ ಹೆಚ್ಚಿನ ಆಸಕ್ತಿ, ನಿರಂತರ ಸಂಪರ್ಕ
* ಒಂದು ವರ್ಷದಿಂದಲೇ ಚುನಾವಣೆಯ ಚಟುವಟಿಕೆ
*  ಸಂಘ ಸಂಸ್ಥೆಗಳಿಂದ ಗಟ್ಟಿ ಸಂಪರ್ಕ
* ಲಾಭದ ನಿರೀಕ್ಷೆಯಿಂದ ರಾಜಕೀಯಕ್ಕೆ ಬಂದಿಲ್ಲ
* ದುಡಿಮೆಯ ಹಣದಿಂದ ಜನಸೇವೆಯ ಆಶಯ
* ವರ್ಷಕ್ಕೆ ಸಾವಿರ ಜನರಿಗೆ ಉದ್ಯೋಗ
ಬಳ್ಳಾರಿ ಜೂ2: ನಾಳೆ 2024 ರ ಜೂನ್ 3 ರಂದು ನಡೆಯುತ್ತಿರುವ ಕರ್ನಾಟಕದ ವಿಧಾನ ಪರಿಷತ್ತಿನ
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ  ನಗರದವರೇ ಆದ ನಾರಾಪ್ರತಾಪ್ ರೆಡ್ಡಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಭಲ ಪೈಪೋಟಿಯನ್ನು ಒಡ್ಡಿರುವ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.
ತಮ್ಮ ಸ್ಪರ್ಧೆ, ಪ್ರಚಾರ, ಮತದಾರರ ಒಲವು ಮೊದಲಾದವುಗಳ  ಬಗ್ಗೆ  ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ನಾನು ಸ್ಪಷ್ಟವಾಗಿ ನಿಮಗೂ ಮತ್ತು ಮತದಾರರಿಗೆ ಹೇಳ ಬಯಸುತ್ತೇನೆ. ಯಾವುದೇ ಲಾಭದ
ನಿರೀಕ್ಷೆಯನ್ನು  ಇರಿಸಿಕೊಂಡು ರಾಜಕೀಯಕ್ಕೆ  ಬಂದಿಲ್ಲ. ವ್ಯಾಪಾರ, ದುಡಿಮೆಯಿಂದ ಬಂದ ಹಣದಿಂದ ಜನ ಸೇವೆಗೆ ರಾಜಕೀಯ ಬಯಸಿರುವೆ.   ಹೊರತು ರಾಜಕೀಯದಿಂದ ನನಗೆ ನಯಾ ಪೈಸೆ ಬೇಕಿಲ್ಲ ಎನ್ನುತ್ತಾರೆ ಪ್ರತಾಪ್ ರೆಡ್ಡಿ.
ನಮ್ಮ ಕುಟುಂಬದ ಶ್ರೀಸಾಯಿ ಸರ್ವೀಸ್ ಟ್ರಸ್ಟ್ ರಚಿಸಿಕೊಂಡಿದೆ. ಅದರಡಿ ಉದ್ಯೋಗ ಮೇಳ ಮಾಡಲು ಖಾಸಗಿ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಪಾಲಿಟೆಕ್ನಿಕ್, ಐಟಿಐ ಮತ್ತು ಪದವಿಯ ಕೊನೆಯ ವರ್ಷದಲ್ಲಿ ಇದ್ದವರ ದತ್ತಾಂಶ ಕಲೆಹಾಕಿ, ಅವರಲ್ಲಿನ ವಿಷಯವಾರು ಪರಿಣಿತಿ, ಆಸಕ್ತಿ, ಪಠ್ಯ ಹೊರತಾದ ಚಟುವಟಿಕಗಳ ಕೌಶಲಗಳನ್ನು ತಿಳಿದುಕೊಂಡು ಪ್ರತಿ ವಿದ್ಯಾರ್ಥಿಯ ಪ್ರತ್ಯೇಕ ಫೈಲ್ ಮಾಡುತ್ತೇವೆ. ಒಪ್ಪಂದ ಮಾಡಿಕೊಂಡ ಕಂಪನಿಗಳಿಗೆ ಅದನ್ನು ಕಳುಹಿಸಿ, ಸಂದರ್ಶನಗಳನ್ನು ಎದುರಿಸಲು ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಕೌಶಲ್ಯ ತರಬೇತಿ ಕೊಡುತ್ತೇವೆ.  ವರ್ಷದಲ್ಲಿ ಎರೆಡು ಬಾರಿ  ಕಾರ್ಪೊರೇಟ್ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಮೇಳ ಮಾಡಿ, ಕನಿಷ್ಟ ಒಂದು ವರ್ಷಕ್ಕೆ  1000  ಯುವ ಜನತೆಗೆ ಉದ್ಯೋಗ  ಕೊಡಿಸುವ ಗುರಿ ಹೊಂದಿದೆ ಎನ್ನುತ್ತಾರೆ.
ಈ ಕೆಲಸವನ್ನು ಟ್ರಸ್ಟ್ ನಿಂದ ಹಾಗೇ ಮಾಡಬಹುದಲ್ಲ. ಇದಕ್ಕೆ ಎಂಎಲ್ ಸಿ ಆಗಬೇಕೆ, ರಾಜಕೀಯ ಬೇಕೆ ಎಂದರೆ. ಯಾವುದೇ ಕೆಲಸ ಕಾರ್ಯಗಳಾಗಲು ಒಂದಿಷ್ಟು ಅಧಿಕಾರ ಬೇಕು. ಇಲ್ಲದಿದ್ದರೆ ಸರ್ಕಾರದ ಮಟ್ಟದಲ್ಲಿ ಕೆಲಸ ಕಾರ್ಯಗಳು ಆಗಲ್ಲ ಎಂಬದನ್ನು ನನ್ನ ಹಲವು ದಶಕಗಳ ರಾಜಕೀಯ ಜೀವನದಲ್ಲಿ ಕಂಡುಕೊಂಡಿರುವ ಸತ್ಯವಾಗಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಆಯ್ಕೆಯಾಗಲು ಬಯಸಿರುವೆ. 
ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯ ನೀವು ಎಂಬ ಪ್ರಶ್ನೆಗೆ. ಕಾಂಗ್ರೆಸ್ ನಿಂದ ಟಿಕೆಟ್ ಬಯಸಿದ್ದು ನಿಜ.
ನಾನು ಜನತಾ ಪರಿವಾರದ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿದ್ದು ಬಂದವನು, ದೇವೆಗೌಡರ ಗರಡಿಯಲ್ಲಿ ಬೆಳೆದಿರುವೆ. ಕಾಂಗದರೆಸ್ ಸೇರಿದ್ದೆ.  ಟಿಕೆಟ್ ನೀಡಲಿಲ್ಲ. ಹಾಗಾಗಿ ಪ್ರಸಕ್ತ ಸನ್ನಿವೇಶದಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರನಾಗಿ ಸ್ಪರ್ಧಿಸುವ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲಿ ಪಕ್ಷ, ಜಾತಿ ಮುಖ್ಯವಲ್ಲ. ಮತದಾರರಲ್ಲಿ ನಾನು ಅವರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಮೂಡಿಸಿದರೆ ಮತ ನೀಡುತ್ತಾರಷ್ಟೇ.
ವಾಸ್ತವದಲ್ಲಿ ನಾನು , ಕಾಂಟ್ರಕ್ಟರ್, ರಿಯಲ್ ಎಸ್ಟೇಟ್‌ ಉದ್ಯಮಿಯಾದರೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷನಾಗಿದ್ದೆ. ನಮ್ಮ ಟ್ರಸ್ಟ್ ನಿಂದ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವೆ.  2018ರಲ್ಲಿ  ಇದೇ ಕ್ಷೇತ್ರದಿಂದ  ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋತರೂ ಮತದಾರರಿಂದ ದೂರವಾಗದೇ ಅವರೊಂದಿಗೆ ಸಂಪರ್ಕ ಬೆಳಸಿಕೊಂಡಿದ್ದೇನೆ.  ಅದೇ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ವಿಶ್ವಾಸ ಹೆಚ್ಚಿಸಿದೆ.
ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ನಾಲ್ಕು ಬಾರಿ ಸುತ್ತಿ ಮತದಾರರನ್ನು ಸಂಪರ್ಕಿಸಿರುವ ಏಕೈಕ ಅಭ್ಯರ್ಥಿ ನಾನಾಗಿದ್ದೇನೆ ಎಂದು ದೈರ್ಯದಿಂದ ಹೇಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಗೆದ್ದ ಮೇಲೆ ಮತ್ತೆ ಆರು ವರ್ಷಗಳ ನಂತರ ತಮ್ಮ ಬಳಿ ಬಂದಿರುವುದು ಮತದಾರರಿಗೆ ತಿಳಿದಿದೆ. ಇನ್ನು ಬಿಜೆಪಿ ಅಭ್ಯರ್ಥಿ 2012 ರಲ್ಲಿ ಗೆದ್ದು ಏನು ಮಾಡಿದ್ದಾರೆ ಎಂಬುದು ಮತದಾರರಿಗೆ ಗೊತ್ತಿದೆ. ಅವರು ಪಕ್ಷದ ಬಗ್ಗೆ ಹೇಳಿ ರಾಜ್ಯ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿ ಮತ ಕೇಳುತ್ತಾರೆ. ನಾನು ವಯಕ್ತಿಕವಾಗಿ ಮತದಾರರ ಅಭಿವೃದ್ಧಿ, ಅವರ ಸಮಸ್ಯೆಗಳ ಪರಿಹಾರದ ಹೋರಾಟದ ಬಗ್ಗೆ ತಿಳಿಸಿ ಮತ ಕೇಳುದ್ದೇನೆ. ನಾಳೆ ಮತದಾರ ನನಗೆ ಈ ಬಾರಿ ಮೊದಲ ಪ್ರಾಶಸ್ತ್ಯ ಮತ ನೀಡಿ ಆಶಿರ್ವಾದ ಮಾಡುತ್ತಾನೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ರೆಡ್ಡಿ. 
ನಿರುದ್ಯೋಗಿ ಪದವೀಧರ ಮತದಾರರಿಗೆ ನಿಮ್ಮ ಭರವಶೆ ಏನೆಂಬ ಸಂಜೆವಾಣಿಯ ಪ್ರಶ್ನೆಗೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯ ಕೊರತೆ ಇದೆ. ತರಬೇತಿ‌ ನೀಡುವ ಕಾರ್ಯಯೋಜನೆ ರೂಪಿಸಲಿದೆ. ಐಎಎಸ್, ಎಪಿಎಸ್ ಸೇರಿದಂತೆ ಯುಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಮಾಡುವ ಚಿಂತನೆ ಇದೆಂದು ಭರವಶೆ ನೀಡಿದ್ದಾರೆ.
ನಿಮ್ಮ ಮೇಲೆ ಭೂ ಕಬಳಿಕೆ ಆರೋಪ ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ. ಆರೋಪ ಮಾಡುವವರು ಕಳೆದ ಎರೆಡು ದಶಕಗಳಿಂದ ಮಾಡುತ್ತಲೇ ಇದ್ದಾರೆ. ನಾನು ಕಾನೂನು ರೀತಿಯಲ್ಲಿ ಖರೀದಿ ಮಾಡಿರುವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದರು.
ನನ್ನೊಂದಿಗೆ ಪತ್ನಿ ಶೈಲಜಾ ಸೇರಿದಂತೆ ಅನೇಕ‌ ಬಂಧುಗಳು, ಸ್ನೇಹಿತರು, ಹಿತೈಷಿಗಳ ವರ್ಗ ಪಕ್ಷ ಬೇಧ ಭಾವ ಬಿಟ್ಟು  ನನ್ನ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ ಅವರ ಆಶಯವೂ ಈ ಬಾರಿ ಈಡೇರಲಿದೆಂಬ ನಂಬಿಕೆಯನ್ನು ಮತದಾರರು ನೀಡಬೇಕಿದೆಂದಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಭಲ ಪೈಪೋಟಿ‌ ನೀಡಿರುವ ಪ್ರತಪ್ ರೆಡ್ಡಿಯವರು ಗೆಲುವಿನ ಉತ್ಸಾಹದಲ್ಲಿ ತಮ್ಮ ಬೆಂಬಲಿಗರಿಂದ ಕೊನೆಯ ದಿನದ ಪ್ರಚಾರ ಕಾರ್ಯಕ್ಕೆ ತೆರಳಿದರು.