ಈಶಾನ್ಯ ಪದವೀಧರರ ಕ್ಷೇತ್ರಗಣಿನಾಡಿನಲ್ಲಿ ಬಿರುಸಿನ  ಮತದಾನ


* ಮಧ್ಯಾಹ್ನಕ್ಕೆ ಶೇ 28 ರಷ್ಟು ಮತದಾನ
* ಅಲ್ಲಲ್ಲಿ ಮತದಾರರಿಗೆ ಹಣ ಹಂಚಿಕೆ
* ಮತದಾರರ ಅನುಕೂಲಕ್ಕೆ ಹೋಬಳಿ ಮಟ್ಟದಲ್ಲಿ ಮತಗಟ್ಟೆ
* ಬಾಲ ಭಾರತಿ ಶಾಲೆಯ ಮತಗಟ್ಟೆಯಲ್ಲಿ ಮಳೆ ನೀರು
* ವಿಕಲಚೇತನರಿಂದಲೂ ಮತದಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,3- ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಇಂದು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಿರುಸಿನ  ಮತದಾನ ನಡೆಯಿತು.
ಮಧ್ಯಾಹ್ನ 2ರ ವೇಳೆಗೆ ಶೇ. 45 ರಕ್ಕೂ ಹೆಚ್ಚು ಮತದಾನವಾಗಿತ್ತು
ಬೆಳಿಗ್ಗೆ 8 ರಿಂದ ಮತದಾನ ಆರಂಭಗೊಂಡಿತು. ಬಹುತೇಖ ಮತಗಟ್ಟೆಗಳಲ್ಲಿ ಮತದಾರರ ಸಾಲು ಕಂಡು ಬಂದಿತು. ಮೊದಲ ಬಾರಿಗೆ ಹೋಬಳಿ‌ಮಟ್ಟದಲ್ಲಿ ಮತಗಟ್ಟೆ ತೆರೆದಿದ್ದಕ್ಕೆ ಗ್ರಾಮೀಣ ಪ್ರದೇಶದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಜೆ 4 ರ ವರೆಗೆ ಮತದಾನ ನಡೆಯಲಿದೆ.
ಬೆಳಿಗ್ಗೆ ಮೊದಲ ಎರೆಡು ತಾಸಿನಲ್ಲಿ ಶೇ 9 ರಷ್ಟು ಮತದಾನವಾಗಿದ್ದು ನಂತರ ಚುರುಕು ಪಡೆದುಕೊಂಡು ಮಧ್ಯಾಹ್ನ 12 ವೇಳೆಗೆ ಶೇ 27 ರಷ್ಟು ಮತದಾನವಾಗಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಮತದಾನಕ್ಕಾಗಿ ಬಳ್ಳಾರಿ ನಗರದಲ್ಲಿ 10, ಕುರುಗೋಡು, ಸಿರುಗುಪ್ಪ, ಸಂಡೂರು ಮತ್ತು ಕಂಪ್ಲಿ ತಾಲೂಕು ಕೇಂದ್ರ, ಹೋಬಳಿಗಳಾದ  ಮೋಕಾ, ರೂಪನಗುಡಿ,  ಕೋಳೂರು, ಚೋರನೂರು, ತೋರಣಗಲ್ಲು, ತೆಕ್ಕಲಕೋಟೆ, ಕರೂರಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿತ್ತು.
ಈ ಮೊದಲು ತಾಲೂಕು ಕೇಂದ್ರದಲ್ಲಿ ಮಾತ್ರ ಇರುತ್ತಿದ್ದ  ಮತಗಟ್ಟೆಯನ್ನು. ಮೊದಲ ಬಾರಿಗೆ ಮತದಾರರ ಅನುಕೂಲಕ್ಕಾಗಿ ಹೋಬಳಿ ಮಟ್ಟದಲ್ಲಿ ತೆರೆದಿದ್ದಕ್ಕಾಗಿ ಅನುಕೂಲವಾಗಿದೆಂದು ಸಿರಿವಾರದ ರಾಧಿಕ, ಮೋಕಾದ ನಾಗೇಂದ್ರ ಸಂಜೆವಾಣಿಗೆ ತಿಳಿಸಿದರು.
ಇನ್ನು ಮೋಕಾ ಮತಗಟ್ಟೆಯಲ್ಲಿ ಮತಚಲಾಯಿಸಿದ ಅಂಧ ಪದವೀಧರ ಮತದಾರ ಚೈತನ್ಯ ಸ್ಥಳೀಯವಾಗಿ ಮತಗಟ್ಟೆ ಮಾಡಿದ್ದು ಅನುಕೂಲಕರ ಮತದಾನಕ್ಕೆ ಸಹಾಯಕರನ್ನು ಪಡೆದಿದ್ದಾಗಿ ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಒಟ್ಟು 24,183 ಮತದಾರರಿದ್ದಾರೆ.ಮತದಾನ ಪ್ರಕ್ರಿಯೆಯಲ್ಲಿ 140 ಜನ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮತದಾನ‌ ಮುಗಿದ ಮೇಲೆ ಮತಪೆಟ್ಟಿಗೆಗಳನ್ನು ಜೂನ್ 6 ರಂದು ನಡೆಯುವ ಮತ ಎಣಿಕೆಗೆ ಕಲ್ಬುರ್ಗಿಗೆ ತೆಗೆದುಕೊಂಡು ಹೋಗಲಿದೆ.
ಸ್ಪರ್ಧಾ ಕಣದಲ್ಲಿ ಬಿಜೆಪಿಯಿಂದ ಮಾಜಿ ಎಂ.ಎಲ್.ಸಿ  ಅಮರನಾಥ ಪಾಟೀಲ್, ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಚಂದ್ರಶೇಖರ್ ಪಾಟೀಲ್, ಸ್ಥಳೀಯ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಸೇರಿದಂತೆ 19 ಜನ ಹುರಿಯಾಳುಗಳು ಇದ್ದಾರೆ.
ನಿನ್ನೆ ರಾತ್ರಿ ಮಳೆ ಬಿದ್ದಿದ್ದರಿಂದ ನಗರದ ಬಾಲ ಭಾರತಿ ಶಾಲೆಯಲ್ಲಿ ಮಳೆ ನೀರು ನಿಂತಿದ್ದರಿಂದ ಅಗ್ನಿ ಶಾಮಕ ಮತ್ತು ಪಾಲಿಕೆಯ ಸಿಬ್ಬಂದಿ ನೀರಯ ಹೊರಗೆ ಪಂಪ್ ಮಾಡಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟರು.
ಮತದಾರರಿಗೆ ಹಲವಡೆ ತಲಾ ಐದು ನೂರು ರೂಗಳನ್ನು ಹಂಚಿದ ಬಗ್ಗೆ ಮಾತುಗಳು ಕೇಳಿ ಬಂದವು. ಹಳ್ಳಿಗಳ ಮತದಾರರಿಗೆ ಹೋಬಳಿ ಕೇಂದ್ರಕ್ಕೆ ಬರಲು ಟ್ರಾಕ್ಸ್ ವ್ಯವಸ್ಥೆಯೂ ಆಗಿದ್ದು ಕಂಡು ಬಂತು.
ಅನೆರಕ ಜನ ವಯಸ್ಸಾದ ಪದವೀಧರರು ಸಹ ಇದೇ ಮೊದಲ ಬಾರಿಗೆ ತಾವು ಇಂತಹ ಚುನಾವಣೆಯಲ್ಲಿ ಮತದಾನ ಮಾಡಿದ್ದಾಗಿ ಹೇಳಿದರು.  ಅನೇಕರು ತಾವು ಪದವೀಧರರಾದರೂ ಮತದಾನಕ್ಕೆ ನೋಂದಣಿ ಮಾಡುತ್ತಿರಲಿಲ್ಲ. ಸ್ಥಳೀಯ ಅಭ್ಯರ್ಥಿಯ ಆಸಕ್ತಿಯಿಂದ ಈ ಬಾರಿ ಅನೇಕರು ಮೊದಲ‌ಬಾರಿಗೆ ಮತದಾನ‌ ಮಾಡಿದಂತಾಗಿದೆ.