ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ:ಮತಗಟ್ಟೆ ತಲುಪಿದ ಚುನಾವಣಾ ಸಿಬ್ಬಂದಿ:ಬಿ.ಫೌಜಿಯಾ ತರನ್ನುಮ್

ಕಲಬುರಗಿ:ಜೂ.2: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ತಲುಪಿದ್ದಾರೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ಎಲ್ಲಾ ತಾಲೂಕಾ ತಹಶೀಲ್ದಾರ ಕಚೇರಿಗಳನ್ನು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರವೆಂದು ಗುರುತಿಸಿದ್ದು, ಭಾನುವಾರ ಈ ಕೇಂದ್ರದಿಂದಲೆ ಮತಗಟ್ಟೆ ಸಿಬ್ಬಂದಿ ಪೋಸ್ಟಲ್ ಬ್ಯಾಲೆಟ್ ಬಾಕ್ಸ್ ಸೇರಿದಂತೆ ಇನ್ನಿತರ ಮತದಾನ ಸಾಮಗ್ರಿ ಪಡೆದು ತಮ್ಮ ಮತಗಟ್ಟೆಯತ್ತ ಹೆಜ್ಜೆ ಹಾಕಿದ್ದಾರೆ ಎಂದರು.

ಜಿಲ್ಲೆಯಲ್ಲಿ 41 ಮುಖ್ಯ ಮತ್ತು 6 ಹೆಚ್ಚುವರಿ ಸೇರಿ 47 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪಿ.ಓ., ಮೈಕ್ರೋ ವೀಕ್ಷಕರು ಒಬ್ಬರು, ಓರ್ವ ಗ್ರೂಪ್ ‘ಡಿ’ ಸಿಬ್ಬಂದಿ ಸೇರಿ 6 ಜನರ ತಂಡದಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.