ಈರುಳ್ಳಿ ಮಾರ್ಕೆಟ್ ನ ಸೇತುವೆ ಅವ್ಯವಸ್ಥೆಯ ಆಗರ

ದಾವಣಗೆರೆ.ಜು.20: ನಗರದ ಈರುಳ್ಳಿ‌ ಮಾರ್ಕೆಟ್ ಬಳಿಯ ಎಪಿಎಂಸಿ‌ ಮೇಲ್ಸುತೇವೆ ಕೆಳಗಡೆ ಅವ್ಯವಸ್ಥೆಯ ಆಗರವಾಗಿದ್ದು, ವಾಹನಗಳು ಹಾಗೂ ಜನರ ಓಡಾಟಕ್ಕೆ ತುಂಬಾ ತೊಂದರೆ ಆಗಿದೆ. ರಸ್ತೆ ಮಧ್ಯದಲ್ಲಿ‌‌ ನೀರು ಹರಿಯುತ್ತಿದ್ದರೆ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಹಾಳಾಗಿವೆ. ಪ್ರಾಣ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಯ ಇಕ್ಕೆಲಗಳಲ್ಲಿ ಕಬ್ಬಿಣದ ರಾಡುಗಳ ಜಾಲರಿ ಅಳವಡಿಕೆ ಮಾಡಲಾಗಿದ್ದು, ಮುರಿದು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಮಹಾನಗರ ಪಾಲಿಕೆಯ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕೆಂಡಮಂಡಲರಾಗಿದ್ದಾರೆ.ರಸ್ತೆ ಮಧ್ಯದಲ್ಲಿ ಕಲ್ಲು ನೆಟ್ಟಿದ್ದು, ಇಲ್ಲಿ ಕಾಲಿಟ್ಟರೆ ಸಾಕು ಒಳಗೆ ಹೋಗುತ್ತದೆ‌. ಇನ್ನು ನೀರು ಹರಿದು ಹೋಗಲು ಅಳವಡಿಸಿರುವ ಪೈಪ್ ಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಹೊರ ಹೋಗುತ್ತಿಲ್ಲ. ಮಳೆ ಬಂದರೆ ಇಲ್ಲಿ ಓಡಾಡಲು ಆಗಲ್ಲ. ಶೇಖರಪ್ಪ ನಗರದ ವಾಸಿಗಳು ಹಾಗೂ ವ್ಯಾಪಾರಸ್ಥರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಲಾರಿ, ಬಸ್, ಆಂಬುಲೆನ್ಸ್ ವಾಹನಗಳ ಈ ಗುಂಡಿಯಲ್ಲಿ ಸಿಲುಕಿದ ಘಟನೆಗಳೂ ನಡೆದಿವೆ. ಸಂಬಂಧಪಟ್ಟವರ ಗಮನಕ್ಕೆ ತಂದರೆ ಕೇವಲ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ. ಸೇತುವೆ ಕೆಳಭಾಗದಲ್ಲಿ ಮೂರು ಕಡೆಗಳಲ್ಲಿ ಕಬ್ಬಿಣದ ಜಾಲರಿ ಹಾಕಿದ್ದು, ಮೂರು ಕಡೆಗಳಲ್ಲಿಯೂ ದೊಡ್ಡದಾದ ಗುಂಡಿ ಬಿದ್ದಿದೆ. ಮಳೆ ಬಂದಾಗ ಇಲ್ಲಿ ನೀರು ಉಕ್ಕಿ ಹರಿಯುವುದರಿಂದ ನಡೆದಾಡಲು ಆಗದು. ಇನ್ನು ವಿದ್ಯುತ್ ದೀಪ ಇಲ್ಲ. ಇದರಿಂದಾಗಿ ರಾತ್ರಿ ವೇಳೆ ಕಳ್ಳರ ಭಯ ಇದೆ. ಪೂರ್ತಿ ಕತ್ತಲಾಗಿರುವ ಕಾರಣ ಜನರು ಭಯದಲ್ಲೇ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಎಪಿಎಂಸಿ ಮೇಲ್ ಸೇತುವೆಯ ಕೆಳಭಾಗದಲ್ಲಿ ಕೆಳ ಸೇತುವೆ ನಿರ್ಮಿಸಿದ್ದು ಅದು ತೀರಾ ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿಲ್ಲ. ಮಳೆ ಬಂತೆಂದರೆ ಮೊಣಕಾಲುದ್ದ ನೀರು, ಇನ್ನು ಸಾಮಾನ್ಯ ದಿನಗಳಲ್ಲಿ ರಾತ್ರಿ ಸಂಚರಿಸಲು ವಿದ್ಯುತ್ ವ್ಯವಸ್ಥೆಯಿಲ್ಲ.. ಕಳ್ಳರಿಗೆ ಹೇಳಿ ಮಾಡಿಸಿದಂತಹ ಸ್ಥಳ. ಆದರೆ ಇದರ ಬಗ್ಗೆ ರೈಲ್ವೆ ಇಲಾಖೆಯಾಗಲಿ ಪಾಲಿಕೆಗಾಗಲಿ ಗಮನವೇ ಇಲ್ಲ. ಸರಿಪಡಿಸುವ ಗೋಜಿಗೂ ಹೋಗಿಲ್ಲ ಅಂತಾರೆ ಜನರು.ಇನ್ನು ಇಲ್ಲಿನ ಅವ್ಯವಸ್ಥೆಗೆ ಬೇಸತ್ತ ಸ್ಥಳೀಯರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ‌. ಎಸ್. ಮಂಜುನಾಥ್ ಗಡಿಗುಡಾಳ್ ಅವರಿಗೆ ಮಾಹಿತಿ ನೀಡಿದರು. ಇದರಿಂದ ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಂಜಿನಿಯರ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು‌.ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಅವರಿಗೆ ನಾನು ಕಳೆದ ಎರಡು ತಿಂಗಳ ಹಿಂದೆಯೇ ಗಮನಕ್ಕೆ ತಂದಿದ್ದರೂ ಯಾಕೆ ಸರಿಪಡಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಯರೂಪಕ್ಕೆ ಬರಬೇಕು ಅಷ್ಟೇ ಎಂದರು. ಅಲ್ಲಿ ತನಕ ಜನರು ಏನು ಮಾಡಬೇಕು. ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ನೋಡಿದರೆ ಎಂಥ ಅನಾಹುತ ಆಗಬಹುದು ಎಂದು ನಿಮಗೆ ಗೊತ್ತಾಗುತ್ತದೆಯಲ್ವಾ ಎಂದು ಪ್ರಶ್ನಿಸಿದರು. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರು, ಯುವಕರು, ಯುವತಿಯರು, ಧಾವಂತದಲ್ಲಿ ಹೋಗುವ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಖಚಿತ. ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು. ಪೈಪ್ ಗಳನ್ನು ಅಗತ್ಯಬಿದ್ದರೆ ಬದಲಾಯಿಸಿ, ತ್ಯಾಜ್ಯ ಸಂಗ್ರಹವಾಗಿದ್ದರೆ ತೆಗೆಸಿ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಿ. ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರು ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಮಂಜುನಾಥ್ ಗಡಿಗುಡಾಳ್ ಆಗ್ರಹಿಸಿದರು.ಜನರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ಮಂಜುನಾಥ್ ಗಡಿಗುಡಾಳ್ ಹಾಗೂ ಸಾವಂತ್ ಜೈನ್ ಅವರು ಸ್ಥಳೀಯರಿಂದ ಹಣ ಸಂಗ್ರಹಿಸಿ ಕಬ್ಬಿಣದ ರಾಡ್ ಗಳಿಗೆ ವೆಲ್ಡಿಂಗ್ ಮಾಡಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ನೆರವಾದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ಕೆ. ಜಿ. ಶಿವಕುಮಾರ್, ಗಾಡಿ ಧರ್ಮಣ್ಣ, ಜಾನ್, ವೆಂಕಟೇಶ್, ಜಗದೀಶ್, ವೀರೇಶ್, ಮುನಿಸ್ವಾಮಿ, ದಾದಾಪೀರ್, ಅಬ್ದುಲ್, ರಫಿಕ್, ಅಮರೇಗೌಡ, ಕೃಷ್ಣಪ್ಪ ಮತ್ತಿತರರು ಇದ್ದರು.

Attachments area