ಈರುಳ್ಳಿ ದರ ದುಬಾರಿಗ್ರಾಹಕರ ಕಣ್ಣಲ್ಲಿ ನೀರು


ಬೆಂಗಳೂರು,ಅ.೩೦-ಕರ್ನಾಟಕದಾದ್ಯಂತ ಈರುಳ್ಳಿ ಬೆಲೆ ತೀವ್ರ ಏರಿಕೆ ಕಂಡಿದೆ. ಕಳೆದ ವಾರದಿಂದ ತೀವ್ರ ಗತಿಯಲ್ಲಿ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಸದ್ಯಕ್ಕೆ ಬೆಲೆ ಇಳಿಯುವ ಯಾವುದೇ ಸೂಚನೆ ಇಲ್ಲ. ಈರುಳ್ಳಿ ದರ ಏರಿಕೆ ಬಿಸಿಯಿಂದ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ೭೫ಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಒಂದೆರಡು ದಿನಗಳಲ್ಲಿ ಈರುಳ್ಳಿ ಬೆಲೆ ಶತಕ ದಾಟಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುತ್ತೇವೆ ವರದಿಗಳು. ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಒಂದು ವಾರದೊಳಗೆ ಈರುಳ್ಳಿ ಬೆಲೆ ಕೆ.ಜಿಗೆ ೪೦ ರಿಂದ ೫೦ ಪ್ರತಿಶತದಷ್ಟು ಹೆಚ್ಚಾಗಿದೆ.
ಭಾನುವಾರ, ಕೆಲವು ತೋಟಗಾರಿಕೆ ಉತ್ಪಾದಕರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸೊಸೈಟಿ ಅಂಗಡಿಗಳು ೭೫ ಕ್ಕೆ ಈರುಳ್ಳಿ ಮಾರಾಟ ಮಾಡಿದ್ದರೆ, ಹಿಂದಿನ ವಾರದಲ್ಲಿ, ಬೆಲೆ ಕೆಜಿಗೆ ೪೦ ರಿಂದ ೪೫ ರ ನಡುವೆ ಇತ್ತು. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಈರುಳ್ಳಿ ಬೆಲೆ ದ್ವಿಗುಣಗೊಂಡಿದ್ದು, ಇದಕ್ಕೆ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ, ತೀವ್ರ ಬರಗಾಲದಂತಹ ಪರಿಸ್ಥಿತಿಗಳು ಮುಖ್ಯ ಕಾರಣ ಎನ್ನಲಾಗಿದೆ.
ಈರುಳ್ಳಿಯನ್ನು ಹೆಚ್ಚು ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲವಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ರಬಿ ಸ್ಟಾಕ್‌ಗಳು ಭಾರಿ ಕುಸಿತ ಕಂಡಿದ್ದರಿಂದ ಮತ್ತು ಈರುಳ್ಳಿ ಹೊಸ ದಾಸ್ತಾನುಗಳು ಇನ್ನೂ ಬರದ ಕಾರಣ ದೇಶಾದ್ಯಂತ ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲೂ ಈರುಳ್ಳಿ ಬೆಲೆ ಖರೀದಿದಾರರನ್ನು ಚಿಂತೆಗೀಡು ಮಾಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ನವದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಈರುಳ್ಳಿಯ ಗರಿಷ್ಠ ಬೆಲೆ ಕೆಜಿಗೆ ೭೦ ರೂ. ಆಗಿದೆ. ಈ ದರ ಏರಿಕೆಯೂ ಡಿಸೆಂಬರ್ ವರೆಗೆ ಮುಂದುವರಿಯುವ ಸಾಧ್ಯತೆಯಿದೆ.