ಈರುಳ್ಳಿ ಕ್ವಿಂಟಲ್‍ಗೆ 3 ಸಾವಿರ, ಕಡಲೆಗೆ 7 ಸಾವಿರ ನೀಡುವಂತೆ ಪ್ರತಿಭಟನೆ

ಆಳಂದ:ಮಾ.3: ಶೀಘ್ರವೇ ಕಡಲೆ ಮತ್ತು ಈರಳ್ಳಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಕ್ವಿಂಟಲ್ ಈರುಳ್ಳಿಗೆ 3500 ರೂಪಾಯಿ ಮತ್ತು ಕಡಲೆ ಧಾನ್ಯಕ್ಕೆ 7 ಸಾವಿರ ರೂಪಾಯಿ ಬೆಲೆಯಲ್ಲಿ ಖರೀದಿಸಬೇಕು ಎಂದು ಕಿಸಾನಸಭಾ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ಗುರುವಾರ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು ಮಾತನಾಡಿ, ಬೆಳೆದ ಈರುಳ್ಳಿ ಮತ್ತು ಕಡಲೆ ಬೆಳೆಗೆ ಬೆಲೆ ಇಲ್ಲದೆ ರೈತರು ನಷ್ಟದಲ್ಲಿದ್ದಾರೆ. ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಿ ಈರುಳ್ಳಿಗೆ 3500 ರೂಪಾಯಿ ಹಾಗೂ ಕಡಲೆ ಕ್ವಿಂಟಲ್‍ಗೆ 7 ಸಾವಿರ ರೂಪಾಯಿ ಬೆಲೆಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿದರು.

ವಾಣಿಜ್ಯ ಬೆಳೆ ಎಂದು ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಈರುಳ್ಳಿ ಕ್ವಿಂಟಲ್‍ಗೆ 3500 ರೂಪಾಯಿ ಬೆಲೆ ನಿಗದಿಪಡಿಸಿ ಖರೀದಿಸಬೇಕು ಇಲ್ಲವಾದಲ್ಲಿ ಕ್ವಿಂಟಲ್‍ಗೆ ಒಂದು ಸಾವಿರ ರೂಪಾಯಿ ಸಹಾಯಧನ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ರೈತರು ಸ್ಪಿಂಕ್ಲರ್‍ಗಾಗಿ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಸ್ಪಿಂಕ್ಲರ್ ಒದಗಿಸಬೇಕು, ಬೆಳೆ ವಿಮೆ ನೀಡುವಲ್ಲಿ ವಿಳಂಬ ದೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ತೊಗರಿ ನೆಟೆರೋಗದ ಪರಿಹಾರ ಕೂಡಲೇ ರೈತರ ಖಾತೆಗಳಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ಅವರ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದರು. ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ, ಮುಖಂಡ ಕಲ್ಯಾಣಿ ತುಕಾಣಿ, ಫಕ್ರುದ್ದೀನ್ ಗೊಳಾ, ವಿಶ್ವನಾಥ ಜಮಾದಾರ, ಜಿಲಾನಿ ಪಟೇಲ ಮತ್ತಿತರು ಇದ್ದರು.