ಈರುಳ್ಳಿಯ ಕೊಳೆರೋಗಕ್ಕೆ ಕಂಗಾಲಾದ ರೈತರು

ಹೂವಿನಹಡಗಲಿ:ಸೆ.17. ತಾಲೂಕಿನಲ್ಲಿ ಕಟಾವಿಗೆ ಬಂದಿರುವ ಈರುಳ್ಳಿ ಬೆಳೆಯಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ರೋಗಪೀಡಿತ ಈರುಳ್ಳಿ ಬೆಳೆ ನೆಲದಲ್ಲೇ ಕೊಳೆಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಕಳೆದ ವರ್ಷವೂ ಈರುಳ್ಳಿಗೆ ಈ ರೋಗ ತಗುಲಿ ತಾಲೂಕಿನಲ್ಲಿ ಸಾವಿರಾರು ಎಕರೆ ಬೆಳೆ ಹಾನಿಗೆ ಕಾರಣವಾಗಿತ್ತು. ಆ ನಷ್ಟದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ರೋಗ ವಕ್ಕರಿಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಇಟ್ಟಿಗಿ ಹೋಬಳಿಯ ಮುಸುಕಿನ ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಮಹಾಜನದಳ್ಳಿ, ತಳಕಲ್ಲು, ಉತ್ತಂಗಿ, ಸೋಗಿ ಹಾಗೂ ಹಿರೇಹಡಗಲಿ ಹೋಬಳಿಯೂ ಸೇರಿದಂತೆ ತಾಲೂಕಿನಲ್ಲಿ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಈ ಪೈಕಿ ಸಾವಿರ ಎಕರೆಗೂ ಅಧಿಕ ಪ್ರದೇಶದ ಬೆಳೆ ರೋಗಪೀಡಿತವಾಗಿದೆ.
ಕಳೆದ ಒಂದು ತಿಂಗಳಿಂದ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಶೀತಪೀಡಿತವಾಗಿವೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಒಂದು ಸಾವಿರ ಎಕರೆ ಪ್ರದೇಶದ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಹಚ್ಚ ಹಸಿರಿನಿಂದ ಕೂಡಿರುವ ಬೆಳೆಯು ರೋಗ ತಗುಲಿದ ಮರುದಿನವೇ ಬಣ್ಣ ಕಳೆದುಕೊಳ್ಳತ್ತದೆ. ಒಂದೇ ದಿನದಲ್ಲಿ ಬೆಳೆ ಶಕ್ತಿ ಕಳೆದುಕೊಂಡು ನೆಲಕ್ಕೆ ಬೀಳುತ್ತದೆ. ರೋಗಪೀಡಿತ ಈರುಳ್ಳಿ ನೆಲದಲ್ಲೇ ಕೊಳೆಯುವುದರಿಂದ ಇಡೀ ಹೊಲದಲ್ಲಿ ದುರ್ನಾತ ಬೀರುತ್ತದೆ. ಈ ರೋಗ ನಿಯಂತ್ರಿಸಲು ಕೀಟನಾಶಕ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ ಎಂದು ಇಟ್ಟಿಗಿ ಗ್ರಾಮದ ರೈತ ಕೆ.ರಾಜಶೇಖರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇದೆ. ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಸತತ ಬರಗಾಲ ಹಾಗೂ ಹಿಂದಿನ ವರ್ಷದಲ್ಲಿ ಆದ ನಷ್ಟವನ್ನು ಈ ವರ್ಷದ ಬೆಳೆ ಸರಿದೂಗಿಸಬಹುದು ಎಂಬ ಲೆಕ್ಕಾಚಾರದಲ್ಲಿರುವಾಗಲೇ ವಕ್ಕರಿಸಿರುವ ರೋಗವು ರೈತರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ನಮ್ಮದಲ್ಲದ ತಪ್ಪಿನಿಂದ ಸತತ ಎರಡು ವರ್ಷ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವೆ. ಜಿಲ್ಲಾಡಳಿತ ವೈಜ್ಞಾನಿಕ ಸಮೀಕ್ಷೆ ನಡೆಸಿ, ನಷ್ಟ ಅನುಭವಿಸಿದ ರೈತರಿಗೆ ಕನಿಷ್ಟ ಬೆಳೆ ನಿರ್ವಹಣೆಗೆ ಮಾಡಿರುವ ಖರ್ಚನ್ನಾದರೂ ಪರಿಹಾರ ರೂಪದಲ್ಲಿ ನೀಡಬೇಕು’ ಎಂದು ರೈತರಾದ ಕೆ.ಪರ್ವತಗೌಡ, ಆದೇಶ, ಹಳ್ಳಿ ಕೊಟ್ರೇಶ ಆಗ್ರಹಿಸಿದರು.