ಈರುಳ್ಳಿಯ ಉಪಯೋಗಗಳು

ಈರುಳ್ಳಿ ರುಚಿಯಾದ ಹಾಗೂ ಪೌಷ್ಠಿಕವಾದ ಆಹಾರ. ಇದರ ಪರಿಚಯ ಎಲ್ಲರಿಗೂ ಇದೆ. ಸುಮಾರು ೫೦ಕ್ಕೂ ಹೆಚ್ಚು ರಾಸಾಯನಿಕ ಅಂಶಗಳಿವೆ ಎಂಬುದು ಈರುಳ್ಳಿಯ ಸಂಶೋಧನೆಯಿಂದ ತಿಳಿದು ಬಂದಿದೆ. ಇವುಗಳು ಆರೋಗ್ಯ ರಕ್ಷಣೆ ಮಾಡುತ್ತವೆ. ಈರುಳ್ಳಿಯಲ್ಲಿ ಹೆಚ್ಚಿನ ವಾಸನೆಯಿರುವುದರಿಂದ, ಇದನ್ನು ವೈದಿಕ ಧರ್ಮ ವಿರೋಧಿಸುತ್ತದೆ. ಆದರೂ ಔಷಧ ರೂಪದಲ್ಲಿ ಸೇವನೆಗೆ ಯಾವ ಬಾಧಕವೂ ಇಲ್ಲ, ಇದರಲ್ಲಿ ತಾಮಸ ಗುಣವಿರುವುದರಿಂದ ಧರ್ಮಶಾಸ್ತ್ರವು ಆಹಾರ ಕ್ರಮದಲ್ಲಿ ಬಳಸುವ ನಿಷೇಧವನ್ನು ಹೇರಿದೆ.

ಗುಣಗಳು
ಔಷಧ ರೂಪದಲ್ಲಿ ಉಪಯೋಗಿಸುವಾಗ ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಶ್ರೇಷ್ಠ. ಈರುಳ್ಳಿ ರಸದಲ್ಲಿ ಬೆವರನ್ನುಂಟುಮಾಡುವ ಗುಣವಿದೆ. ಈರುಳ್ಳಿಯನ್ನು ಹೆಚ್ಚು ಉಪಯೋಗಿಸುವುದರಿಂದ ಆಯಸ್ಸು ವೃದ್ಧಿಸುತ್ತದೆ. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿದೆ. ಮಲಬದ್ಧತೆ, ಕೆಮ್ಮು, ವಾತರೋಗ, ಹೊಟ್ಟೆಗೆ ಸಂಬಂಧ ಪಟ್ಟಂತಹ ವಿಕಾರಗಳಿಗೆ, ಹೊಟ್ಟೆಯಲ್ಲಿ ಹುಳು ಕಚ್ಚಿದ ಬಾಧೆಗೆ ಎಲ್ಲಕ್ಕೂ ಇದರ ಉಪಯೋಗವಿದೆ.

ಉಪಯೋಗ

೧. ಜಠರ ಮತ್ತು ಸಂಬಂಧಿ ರೋಗ: ಹಸಿ ಈರುಳ್ಳಿಜೊತೆ, ಹಸಿಸೌತೆಕಾಯಿ, ಟೊಮಾಟೊ, ಕ್ಯಾರೆಟ್ ಬೆರೆಸಿ ಉಪಯೋಗಿಸುವುದರಿಂದ ಜಠರ ಮತ್ತು ಕರುಳು ಸಂಬಂಧದ ರೋಗಗಳ ಶಮನಕ್ಕೆ ಸಾಕಷ್ಟು ಉಪಯೋಗವಾಗುತ್ತದೆ.
೨. ಬಾಯಿಯ ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ: ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ಮೆದುವಾಗಿ ತಿಕ್ಕಿದರೆ ರಕ್ತಸ್ರಾವ ನಿಲ್ಲುತ್ತದೆ.
೩. ಹೃದಯರೋಗ: ಪ್ರತಿದಿನ ಹಸಿ ಈರುಳ್ಳಿಯನ್ನು ಆಹಾರದಲ್ಲಿ ಸೇವಿಸುತ್ತಿದ್ದರೆ ಹೃದಯರೋಗ ಬರುವುದಿಲ್ಲ.
೪. ಅಮಶಂಕೆ, ಅಜೀರ್ಣ: ಸುಟ್ಟ ಈರುಳ್ಳಿಯನ್ನು ಅಗಿದು ತಿನ್ನುವುದರಿಂದ ರೋಗಾಣು ಪೂರಿತ ಅಮಶಂಕೆ ಗುಣವಾಗುವುದು ಅಜೀರ್ಣ ನಿವಾರಣೆಯಾಗುವುದು.
೫. ದಂತಕ್ಷಯ: ಸುಟ್ಟ ಈರುಳ್ಳಿಯನ್ನು ಅಗಿದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುವುದು.
೬. ಚೇಳು ಕಚ್ಚಿದರೆ: ಜೇನುನೋಣ ಅಥವಾ ಚೇಳು ಕಚ್ಚಿದ ಜಾಗಕ್ಕೆ ಈರುಳ್ಳಿ ಜಜ್ಜಿ ಅದರ ರಸ ಹಾಕುವುದರಿಂದ ಉರಿ-ನೋವು ಕಡಿಮೆಯಾಗುತ್ತದೆ.
೭. ಚರ್ಮರೋಹಕ್ಕೆ: ಬಿಳಿ ಈರುಳ್ಳಿ ರಸಕ್ಕೆ ಅರಿಶಿನದ ಪುಡಿಯನ್ನು ಬೆರಸಿ ಕಜ್ಜಿ, ತುರಿಕೆ ಇರುವ ಜಾಗಕ್ಕೆ ಲೇಪಿಸಿದರೆ ಇಂತಹ ಚರ್ಮರೋಗ ಗುಣವಾಗುತ್ತದೆ.
೮. ಅಂಗಾಲು ಒಡೆದಾಗ: ಜಜ್ಜಿದ ಈರುಳ್ಳಿಯನ್ನು ಅಂಗಾಲುಗಳಿಗೆ ಹಚ್ಚಿ ಉಜ್ಜುವುದರಿಂದ ಅಥವಾ ಆ ಭಾಗಕ್ಕೆ ಕಟ್ಟುವುದರಿಂದ ಅಧಿಕ ಫಲವುಂಟು.
೯. ದೇಹದ ತೂಕ ಹೆಚ್ಚಿಸಿಕೊಳ್ಳಲು: ತೆಳ್ಳಗಿರುವವರು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಹಸಿ ಈರುಳ್ಳಿಜೊತೆ ಬೆಲ್ಲ ಸೇವಿಸಿದರೆ ಸಹಾಯವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧