ಈರುಳ್ಳಿಗೆ 2000 ರೂಪಾಯಿ ಬೆಂಬಲ ಬೆಲೆ ನೀಡಲು ಆಗ್ರಹ

ತಾಳಿಕೋಟೆ:ಮಾ.25: ರೈತರು ಬೆಳೆದ ಈರುಳ್ಳಿಗೆ ಪ್ರತಿ ಕ್ವಿಂಟಲ್ ಗೆ ಕನಿಷ್ಠ 2000/- ರೂ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಶುಕ್ರವಾರದಂದು ಮನವಿ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಕಾರಣ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈರುಳ್ಳಿಯನ್ನು ತಂದ ರೈತರು ತಹಶೀಲ್ದಾರ ಕಛೇರಿ ಮುಂಬಾಗ ಹಾಕಿ ಸರಕಾರದ ವಿರುದ್ದ ಪ್ರತಿಭಟಿಸಿ ಧಿಕ್ಕಾರ ಕೂಗಿ ಇಂದು ಆಕ್ರೋಶ ವ್ಯಕ್ತಪಡಿಸಲಾಗಿದೆ ಈಸಧ್ಯ ಈರುಳ್ಳಿಗೆ ಕ್ವಿಂಟಲ್ ಗೆ ಕೇವಲ 600 ರಿಂದ 700 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋದರೆ ಅಗ್ಗದ ಧರಕ್ಕೆ ಮಾರಾಟ ಮಾಡಿ ಸಾರಿಗೆ ವೆಚ್ಚವನ್ನು ತಮ್ಮ ಸ್ವಂತ ಖರ್ಚಿನಿಂದ ಭರಿಸಬೇಕಾಗುತ್ತದೆ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಳೆದ ರೈತರ ಉಳಿವಿಗಾಗಿ ಕನಿಷ್ಠ ಪ್ರತಿ ಕ್ವಿಂಟಾಲಗೆ 2000/- ರೂ ಗಳಂತೆ ಬೆಂಬಲ ಬೆಲೆ ಘೋಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
 ಈ ಸಂದರ್ಭದಲ್ಲಿ ತಾಲೂಕಾ ಅದ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಸಚಿನ ಬಿರಾದಾರ, ಆನಂದ ಗಬಸಾವಳಗಿ, ಶಿವನಗೌಡ ಗಬಸಾವಳಗಿ, ಯಮನೂರಿ ಕುಂಬಾರ, ರವಿ ತೋಟದ, ಭೀಮನಗೌಡ ಚಿಕ್ಕರೆಡ್ಡಿ, ಚಿನ್ನಪ್ಪ ದೊರೆ, ಹಣಮಂತ ಹಾಲರೆಡ್ಡಿ, ಸಚಿನ ಮಿಣಜಗಿ, ರಾಮನಗೌಡ ಹಾಲರೆಡ್ಡಿ ಇತರರು ಉಪಸ್ಥಿತರಿದ್ದರು.