ಈದ್ ಮಿಲಾದ್ ಮೋದಿ ಶುಭಾಶಯ

ಬೆಂಗಳೂರು,ಅ.೩೦- ದೇಶದಾದ್ಯಂತ ಇಂದು ಪ್ರವಾದಿ ಮಹ್ಮದ್ ಜನ್ಮ ದಿನಾಚರಣೆ ಈದ್ ಮಿಲಾದ್ ಆಚರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಪ್ರಧಾನಮಂತ್ರಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರವಾದಿ ಮಹ್ಮದ್ ಜನ್ಮದಿನಾಚರಣೆ ಅಂಗವಾಗಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈದ್ ಮಿಲಾದ್ ಆಚರಣೆ ನಡೆಯುತ್ತಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಮಾಹಿತಿಯನ್ವಯ ಕ್ಯಾಲೆಂಡರ್‌ನ ೩ನೇ ತಿಂಗಳು ರಬಿವುಲ್ ಅವ್ವಲ್ ಪ್ರವಾದಿ ಅವರು ಆವ್ವಲ್ ತಿಂಗಳ ೧೨ ರಂದು ಸೌದಿಅರೇಬಿಯಾದ ಮೆಕ್ಕಾದಲ್ಲಿ ಜನಿಸಿದ್ದಾರೆ.
ಮಿಲಾದ್ -ಉನ್-ನಬಿ ದಿನದ ಶುಭಾಶಯಗಳು. ಈ ದಿನವು ಕರುಣೆ ಮತ್ತು ಸೋದರತ್ವವನ್ನು ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ. ಈದ್ ಮುಬಾರಕ್ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರವಾದಿ ಮಹ್ಮದ್ ಹುಟ್ಟಿದ ದಿನ ಆಚರಣೆಯ ಶುಭಾಶಯಗಳನ್ನು ತಿಳಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲ ನಾಗರಿಕರಿಗೆ ವಿಶೇಷವಾಗಿ ಭಾರತದ ಮತ್ತು ಹೊರ ರಾಷ್ಟ್ರಗಳಲ್ಲಿರುವ ನಮ್ಮ ಮುಸ್ಲಿಂ ಸೋದರ ಮತ್ತು ಸೋದರಿಯರಿಗೆ ಶುಭಾಶಯಗಳು, ಸಮಾಜದ ಒಳಿತಿಗಾಗಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ನಾವೆಲ್ಲರೂ ಅವರ ಬೋಧನೆಗಳನ್ನುಅನುಸರಿಸೋಣ ಎಂದಿದ್ದಾರೆ.