ಈದ್ ಮಿಲಾದ್ : ನಿನ್ನೆ ರಾತ್ರಿ 18 ಕಡೆ ನಾಕಾಬಂದಿ

ರಾಯಚೂರು.ಅ.30- ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಅಹೋರಾತ್ರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ 18 ಕಡೆ ರಾತ್ರಿ 11 ರಿಂದ ಬೆಳಗಿನ ಜಾವ 5 ಗಂಟೆವರೆಗೆ ನಾಕಾಬಂದಿ ಹಾಕಲಾಗಿತ್ತು.
ರಾತ್ರಿ ವೇಳೆಯಲ್ಲಿ ಕೆಲ ಯುವಕರು ರಸ್ತೆಗಳಲ್ಲಿ ಬೈಕ್ ರೈಡಿಂಗ್, ವ್ಹೀಲಿಂಗ್ ಹಾಗೂ ಗುಂಪು ಕಟ್ಟಿಕೊಂಡು ವಿವಿಧ ಸ್ಪರ್ಧೆಗಳ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಸಂಚಾರ ಸಮಸ್ಯೆ ಎದುರಿಸಬೇಕಾಯಿತು. ಜಿಲ್ಲಾ ಪೊಲೀಸ್ ಮೇಲಾಧಿಕಾರಿಗಳು ತುರ್ತು ಪರಿಸ್ಥಿತಿ ಅನುಸಾರವಾಗಿ ಸ್ಥಳೀಯವಾಗಿ ಆಯಾ ವೃತ್ತಗಳಲ್ಲಿ ಕಾವಲು ನಿರ್ವಹಿಸುತ್ತಿರುವ ಪೊಲೀಸರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಲಾಗಿತ್ತು.
ಆದರೆ, ಕಾವಲಿಗೆ ನಿಯುಕ್ತಿಗೊಂಡು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಯಾವುದೇ ವಿವೇಚನೆ ನಡೆಸದೇ ಸಂಪೂರ್ಣವಾಗಿ ನಾಕಾಬಂದಿ ವಿಧಿಸಿದರಿಂದ ಕೆಲ ಜನರು ಅಗತ್ಯ ಸಂಚಾರಕ್ಕಾಗಿ ನಗರವನ್ನು ಸುತ್ತುವರೆದು ತಮ್ಮ ಸ್ಥಳಗಳಿಗೆ ಸೇರಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈದ್ ಮಿಲಾದ್ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಆಯೋಜಿಸಿದ ಪೊಲೀಸರು ಸ್ಥಳೀಯ ಜನರ ಅಗತ್ಯತೆಯನ್ನು ಗಮನದಲ್ಲಿರಿಸಬೇಕಾಗಿತ್ತು. ತುರ್ತಾಗಿ ಬೆಳಗಿನ ಊರಿಗೆ ತೆರಳುವ ಕೆಲ ಕುಟುಂಬಗಳು ತೊಂದರೆಗೆ ಗುರಿಯಾಗಬೇಕಾಯಿತು.
ಆದರೆ, ಈ ನಾಕಾಬಂದಿಯಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವಲ್ಲಿ ಅನುಕೂಲವಾಗಿದೆ. ಇಲ್ಲದಿದ್ದರೇ, ರಾತ್ರಿ ವೇಳೆಯಲ್ಲಿ ಕೆಲ ಯುವಕರು ವ್ಹೀಲಿಂಗ್, ಬೈಕ್ ರೇಸಿಂಗ್ ಮತ್ತು ಬಡಾವಣೆಗಳಲ್ಲಿ ಲೈಟ್ ಒಡೆಯುವ ಘಟನೆಗಳು ನಿಯಂತ್ರಿಸಲು ಸಾಧ್ಯವಾಗಿದೆ. ಕಳೆದ ವರ್ಷ ಅನೇಕ ಕಡೆ ಲೈಟ್‌ಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದವು.