ಈದ್ಗಾದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದ ಮಾಜಿ ಸಚಿವ ಎನ್ ಎಂ ನಬೀ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 17 :-   ಪಟ್ಟಣದ ಈದ್ಗಾದಲ್ಲಿ ಸಸಿನೆಡುವ ಮೂಲಕ ಮುಸ್ಲಿಂ ಬಾಂಧವರಿಗೆ ಮಾಜಿ ಸಚಿವ ಎನ್ ಎಂ ನಬೀ  ಪಟ್ಟಣದ ಸೂಪರ್ ಹೀರೋಸ್ ತಂಡದವರು ಜನತೆಗೆ  ಸಸಿ ಕೊಡುವ ಮೂಲಕ  ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ಸಚಿವ ಎನ್ ಎಂ ನಬೀ  ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡುತ್ತಾ  ಪ್ರತಿಯೊಬ್ಬರೂ ಮನೆಯಂಗಳದಲ್ಲಿ ಒಂದೊಂದು ಸಸಿನೆಡುವ ಮೂಲಕ ಮನೆಗೊಂದು ಗಿಡ ಊರಿಗೊಂದು ವನ ಎಂಬಂತೆ ನಿರ್ಮಾಣವಾದಲ್ಲಿ  ಮಳೆ ಬೆಳೆ ಉತ್ತಮವಾಗುವ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಹಚ್ಚಹಸಿರಿನಂತೆ  ಆರೋಗ್ಯವಂತ ಸಮಾಜ ನಿರ್ಮಾಣವಾಗಬಲ್ಲದು ಅಲ್ಲದೆ ನಾಳೆ ಪ್ರಳಯವಾಗುತ್ತದೆ ಎಂದು ತಿಳಿದಿದ್ದರೂ ಇಂದು ಒಂದು ಗಿಡ ನೆಡು ಎನ್ನುವ ಸಾಲನ್ನು ಉಲ್ಲೇಖಿಸಿ ಪರಿಸರ ಉಳಿಸಿ ಬೆಳೆಸುವ ಕುರಿತು  ಮುಸ್ಲಿಂ ಬಾಂಧವರಿಗೆ ಕಿವಿ ಮಾತು ಹೇಳಿದರು. 
ಕೂಡ್ಲಿಗಿ ಪಟ್ಟಣದ ಜೆಸಿಐ ಮಾಜಿ ಅಧ್ಯಕ್ಷ ಹಾಗೂ ಸೂಪರ್ ಹೀರೋಸ್ ತಂಡದ ಅಧ್ಯಕ್ಷ ಎನ್ ಅಬೂಬಕರ್ ಮಾತನಾಡಿ ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ ಸೂಪರ್ ಹೀರೋಸ್ ತಂಡದಿಂದ ಈದ್ಗಾದಲ್ಲಿ ಮಾಜಿ ಸಚಿವರ ಹಾಗೂ ಸಮುದಾಯದ ಮುಖಂಡರ ಮಾರ್ಗದರ್ಶನದಲ್ಲಿ ಸಸಿ ನೆಡುವ ಮೂಲಕ ಮುಸ್ಲಿಂ ಬಾಂಧವರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಂತರದ ದಿನಗಳಲ್ಲಿ ಸಹ  ಪಟ್ಟಣದ ಅವಶ್ಯಕ ಸ್ಥಳದಲ್ಲಿ ಸೂಪರ್ ಹೀರೋಸ್ ತಂಡ ಸಸಿ ನೆಟ್ಟು ಬರೀ ಜನತೆಗೆ  ಉಪಯೋಗವಲ್ಲದೆ ಪಕ್ಷಿಗಳ ಸಂಕುಲಕ್ಕೂ  ಹಣ್ಣು ಸಿಗುವ ಸಸಿಗಳನ್ನು ನೆಟ್ಟು ಪರಿಸರದಲ್ಲಿ  ಪಕ್ಷಿಗಳ  ಸಂಕುಲವು ಬದುಕುವ ರೀತಿಯ ಸಸಿಗಳನ್ನು ನೆಡುವ ಯೋಜನೆ ತಂಡದ್ದಾಗಿದೆ ಅಲ್ಲದೆ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿಯಬೇಕು ಸಸಿಗಳನ್ನು ನೆಟ್ಟು ಮಕ್ಕಳ ಪೋಷಣೆಯಂತೆ ಸಸಿಗಳನ್ನು ಬೆಳೆಸುವಂತೆ ಪಾಲಕ ಪೋಷಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ  ಎನ್ಎಂ ನೂರ್ ಅಹಮದ್ ಹಾಗೂ ಸೂಪರ್ ಹಿರೋಸ್ ತಂಡದ  ಸದಸ್ಯರಾದ ನೂರ್  ಆರೀಫ್ ,  ತಾಹಿರ್ ಇತರೆ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.