ಈಡೇರದ ಅಂಬೇಡ್ಕರ್ ಆಶಯಗಳು; ವಿಷಾಧ

ದಾವಣಗೆರೆ.ಏ.೧೬; ಬಾಲ್ಯದಲ್ಲಿಯೇ ಸಾಮಾಜಿಕ ಅಸಮಾನತೆಯ ವಿರುದ್ಧ ತಮ್ಮ ಪ್ರಬುದ್ಧ ವೈಚಾರಿಕತೆಯಿಂದ ಬಂಡಾಯ ಸಾರುವ ಮೂಲಕ ದಮನಿತ ಸಮುದಾಯಗಳ ಧ್ವನಿಯಾದ ಅಂಬೇಡ್ಕರ್ ಆದರ್ಶಗಳು ಎಲ್ಲರ ಬದುಕಿಗೆ ದಾರಿದೀಪವಾಗಲಿ ಎಂದು ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಾರ್ಗೆಟ್ ಅಸ್ಲಾಂ ಆಶಿಸಿದರು. ನಗರದ ಕರ್ನಾಟಕ ಜನಮನ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 130ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶೋಷಿತ ಜನಾಂಗಗಳ ಏಳಿಗೆಯು ಶಿಕ್ಷಣದಿಂದ ಮಾತ್ರ ಸಾಧ್ಯ. ರಾಜಕೀಯ ಸ್ಥಾನಮಾನಗಳಿಂದ ಸಮಾನತೆಯನ್ನು ಪಡೆಯಬಹುದೆಂಬ ಅಂಬೇಡ್ಕರ್‌ರವರ ಆಶಯ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರದಿರುವುದು ವಿಷಾಧನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ “ಪಾರು” ಚಿತ್ರತಂಡ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಚಿತ್ರ ಪ್ರದರ್ಶನ ಮುಂದುವರೆಯಲು ಚಿತ್ರದ ನಿರ್ದೇಶಕ ಹನುಮಂತ್ ಪೂಜಾರಿ ಇವರಿಗೆ 20 ಸಾವಿರ ರೂ.ಗಳ ಚೆಕ್ ನೀಡುವ ಜೊತೆಗೆ ಚಿತ್ರವು ಯಶಸ್ವಿ ಪ್ರದರ್ಶನ ಕಾಣುವುದು ಮಾತ್ರವಲ್ಲದೆ ಪ್ರಶಸ್ತಿ ಗಳಿಸುವಂತಾಗಲಿ ಎಂದು ಹಾರೈಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಮಾತನಾಡಿ, ಅಸಮಾನತೆಯ ವಿರುದ್ಧ ಹೋರಾಡಿದ “ಕಪ್ಪು ಸೂರ್ಯ” ಮಹಾನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಸೈದ್ಧಾಂತಿಕ ನಿಲುವುಗಳು ಭವ್ಯ ಭಾರತದ ಯುವ ಜನಾಂಗದ ದೇಶ ಪ್ರೇಮವನ್ನು ಇಮ್ಮಡಿಗೊಳಿಸಿ, ಭಾವೈಕ್ಯದ ಸಂದೇಶ ಸಾರುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಾರಿಮಹೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಿ.ಕೃಷ್ಣಪ್ಪ ವಹಿಸಿದ್ದರು. ಕನ್ನಡಪರ ಹೋರಾಟಗಾರ ಟಿ.ಎಂ.ಶಿವಯೋಗಿ, ಜೈ ಕರುನಾಡ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ, ಪರುಶರಾಮ್ ನಂದಿಗಾವಿ, ಎಲ್.ದೇವರಾಜ ಸ್ವಾಮಿ, ಕನ್ನಡ ಜಾಗೃತಿ ಸಮಿತಿಯ ಸಿದ್ಧರಾಜು, ಅಕ್ಬರ್ ಭಾಷಾ, ಸುಬೋಧ ಸೇರಿದಂತೆ ಪಾರು ಚಲನಚಿತ್ರ ತಂಡದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.