
ಬೀದರ್: ಸೆ.4:ಈಡೀಗ ಸಮಾಜ ನಿಗಮಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಅಗತ್ಯ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಭರವಸೆ ನೀಡಿದರು.
ಭಾನುವಾರ ನಗರದ ಪ್ರತಾಪನಗರ ಬಡಾವಣೆಯಲ್ಲಿರುವ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಈಡೀಗ ಸಮಾಜದಿಂದ ಹಮ್ಮಿಕೊಂಡು ಬ್ರಹ್ಮರ್ಷಿ ನಾರಾಯಣ ಗುರುಗಳ 169ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗುರುಗಳು ಒಂದೇ ಧರ್ಮ, ಒಂದೇ ಜಾತಿ, ಜನಾಂಗ, ಒಂದೇ ದೇವರು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು. ಅಣ್ಣ ಬಸವಣ್ಣನವರ ತತ್ವಗಳಿಗೆ 19ನೇ ಶತಮಾನದಲ್ಲಿ ಮರು ಜೀವ ನೀಡಿದವರು ಬ್ರಹ್ಮರ್ಷಿ ನಾರಾಯಣ ಗುರುಗಳು. ಅವರ ಅನುಯಾಯಿಗಳಾದ ತಾವೆಲ್ಲರು ಎಲ್ಲ ಸಮುದಾಯಗಳ ಏಳಿಗೆಗೆ ಪ್ರಮುಖ ಪಾತ್ರ ವಹಿಸಿದ್ದಿರಿ, ಈ ಸಮಾಜದಿಂದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಶೀಲ ಮೇಧಾವಿಗಳು, ಪರಿಣಿತರು ಹಾಗೂ ಉದ್ಯೋಗ ಪತಿಗಳಲ್ಲದೇ ರಾಜಕೀಯದಲ್ಲೂ ಮೇಲುಗೈ ಸಾಧಿಸಿದ ಹೆಗ್ಗಳಿಕೆ ಈ ಸಮಾಜಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಪೌರಾಡಳಿತ ಸಚಿವರಾದ ರಹಿಮ್ ಖಾನ್ ಮಾತನಾಡಿ, ಪೃಕೃತಿ ಮನುಷ್ಯನಲ್ಲಿ ಯಾವುದೇ ಭೇದ ಏಣಿಸದೇ ಸರ್ವರಿಗೆ ಸಮವಾಗಿ ಗಾಳಿ, ಬೆಳಕು, ಜಲ ದಯಪಾಲಿಸುತ್ತದೆ. ಆದರೆ ಮನುಷ್ಯ ಅದರಲ್ಲಿ ಭೇದ ಏಣಿಸುವ ಮೂಲಕ ತಾರತಮ್ಯ ಭಾವನೆ ಹುಟ್ಟು ಹಾಕುತ್ತಿರುವನು. ಇಂಥ ಸ್ವಾರ್ಥವನ್ನೇ ಕಡಿಮೆ ಮಾಡಲು ಆಗಾಗ ನಾರಾಯಣ ಗುರುಗಳಂತಹ ದಾರ್ಶನಿಕರು ಹುಟ್ಟಿ ಬಂದು ಸಮಾಜ ಹಾಗೂ ದೇಶ ಉದ್ದಾರ ಮಾಡಬಲ್ಲರು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ ಮಾತನಾಡಿ, ನಮ್ಮ ಸಮಾಜ ಆಳುವ ಸರ್ಕಾರಗಳಿಗೆ ಪ್ರತಿ ವರ್ಷ 25 ಸಾವಿರ ಕೋಟಿ ಆದಾಯ ತಂದು ಕೊಡುವ ಸಮಾಜವಾಗಿದ್ದು, ಈ ಸಮಾಜವನ್ನು ಎಲ್ಲ ಸಮಾಜಗಳು ಗೌರವಿಸುವ ಕಾರ್ಯ ಮಾಡಬೇಕಿದೆ. ‘ಶಿಕ್ಷಣದಿಂದ ಸ್ವಾತಂತ್ರ್ಯ, ವಿವಿಧ ಉದ್ಯಮಗಳಿಂದ ಅಭಿವೃದ್ಧಿ’ ಎಂಬ ಗುರುಮಂತ್ರವನ್ನು ನಿತ್ಯ ಆಚರಣೆಯಲ್ಲಿ ತರಬೇಕೆಂದು ಕರೆ ನೀಡಿದರು.
ಮಾಜಿ ಮಂತ್ರಿಗಳು ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಅಧಿಕಾರ ಅವಧಿಯಲ್ಲಿ ಈಡೀಗ ಸಮಾಜ ನಿಗಮ ಸ್ಥಾಪಿಸಲಾಗಿದ್ದು, ಹಾಲಿ ಸಿದ್ಧರಾಮಯ್ಯ ಸರ್ಕಾರ ಈ ನಿಗಮಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಾನಿಧ್ಯ ವಹಿಸಿದ ಕಲಬುರಗಿಯ ಪೂಜ್ಯ ಡಾ.ಪ್ರಣವಾನಂದ ಶ್ರೀಗಳು, ಪೂಜ್ಯ ವಿಖ್ಯಾತಾನಂದ ಶ್ರೀಗಳು, ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ ಹಾಗೂ ಬಾಲರಾಜ ಗುತ್ತೆದಾರ ಮಾತನಾಡಿದರು. ಈಡೀಗ ಸಮಾಜದ ಜಿಲ್ಲಾ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಸಮಾಜದ ಮುಖಂಡರಾದ ರಾಜೇಶ ಗುತ್ತೇದಾರ, ವಿನಯ ಗುತ್ತೇದಾರ, ಅಶೋಕ ಚೌಹಾಣ, ಬಸವರಾಜ ಮಾಳಗೆ, ಮನ್ನಾನ್ ಸೇಠ್, ನ್ಯಾಯವಾದಿ ನಾರಾಯಣ ಗಣೇಶ, ಶಂಕರರಾವ ನೇಳಗೆ, ಸಂಗಯ್ಯ ಈಡೀಗ ಸುಲ್ತಾನಪುರ, ಸಿ.ಕೆ ಗೌಡ, ಅಶೋಕ ಗೌಡ, ಶ್ರೀಮಂತ ಗೌಡ, ಸಂತೋಷಿ ಗೌಡ ಸೇರಿದಂತೆ ಹಲವರು ಸಮಾಜದ ಮುಖಂಡರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿದ್ದರು.
ಆರಂಭದಲ್ಲಿ ಶಿವಕುಮಾರ ತೇಲಂಗ ಸ್ವಾಗತಿಸಿದರು. ವಿನಾಯಕ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಸುಭಾಷ ಜಂಬಗಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಗಣೇಶ ಮೌದಾನದಿಂದ ಸಾಯಿ ಸ್ಕೂಲ್ ಅವರಣದ ವರೆಗೆ ನಾರಾಯಣ ಗುರುಗಳ ಭಾವಚಿತ್ರ ಭವ್ಯ ಮೆರವಣಿಗೆ ಜರುಗಿತು. ಭಾಜೆ, ಬಜೆಂತ್ರಿಯೊಂದಿಗೆ ಮೆರವಣಿಗೆಗೆ ಕಳೆ ತಂದು ಕೊಟ್ಟಿತ್ತು. ನಂತರ ವೇದಿಕೆ ಬ್ರಹ್ಮರ್ಷಿ ನಾರಾಯಣ ಗುರುಗಳ ಭಾವಚಿತ್ರದ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.