ಈಡಿಗ- ಬಿಲ್ಲವ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಸ್ವಾಗತ

ಕಲಬುರಗಿ:ಫೆ.28:ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ನುಡಿದಂತೆ ನಡೆದು ಈಡಿಗ – ಬಿಲ್ಲವ ಸೇರಿದಂತೆ 26 ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಇಂದು (ಫೇ.27) ಆದೇಶ ಪತ್ರವನ್ನು ಹೊರಡಿಸಿರುವುದಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಕೇಂದ್ರ ಸಮಿತಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ. . ಹಿಂದುಳಿದ ವರ್ಗಗಳ ಇಲಾಖೆ ಅಡಿ ಬರುವ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಈ ವರ್ಷದ ಅನುದಾನದ ಅಡಿಯಲ್ಲಿ 25 ಲಕ್ಷಗಳನ್ನು ಮಂಜೂರು ಮಾಡಿ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳುವಂತೆ ನಿರ್ದೇಶಕರಿಗೆ ರಾಜ್ಯದ ಸಮಾಜ ಕಲ್ಯಾಣ ಖಾತೆ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಆದೇಶ ಪತ್ರವನ್ನು ಹೊರಡಿಸಿರುವುದು ಅಭಿನಂದನಾರ್ಹ ವಿಷಯವಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಮುದಾಯದ ಹೋರಾಟದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರು ನಿಗಮವನ್ನು ಸ್ಥಾಪನೆ ಆದೇಶ ಹೊರ ಬಿದ್ದಿದ್ದು ಈಗ ಕುಲಶಾಸ್ತ್ರೀಯ ಅಧ್ಯಯನಕ್ಕೂ ಹಣ ಮಂಜೂರು ಮಾಡಿರುವುದು ಸಚಿವ ಕೋಟ ಅವರ ಬದ್ಧತೆ ಮತ್ತು ವಚನ ಪಾಲನೆಯ ದ್ಯೋತಕ ಎಂದು ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಕರ್ನಾಟಕದಾದ್ಯಂತ ಈಡಿಗ – ಬಿಲ್ಲವ ಸೇರಿದಂತೆ 26 ಪಂಗಡಗಳ ಸಮುದಾಯದವರು ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ, ನಿರಶನ ಮುಂತಾದ ಹೋರಾಟಗಳನ್ನು ಮಾಡಿರುವುದಕ್ಕೆ ಸಂದ ಯಶಸ್ಸು ಇದಾಗಿದ್ದು ಅದೇ ರೀತಿಯಾಗಿ ಮಂಗಳೂರು ಭಾಗದಲ್ಲಿ ಬಿಲ್ಲವ ಸಮುದಾಯದ ನಾಯಕರು ಹೋರಾಟದ ಅಂಗಣಕ್ಕೆ ಇಳಿದಿರುವುದರಿಂದ ಈ ಜಯ ಪ್ರಾಪ್ತಿಯಾಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ಆರಂಭವಾಗಿ ಸಮುದಾಯದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ನಿಖರ ಅಂಕಿ ಅಂಶ ದೊರೆಯಲು ಅನುಕೂಲವಾಗುವುದು. ಸರಕಾರವು ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಅಧ್ಯಕ್ಷರ ಹಾಗೂ ನಿರ್ದೇಶಕರನ್ನು ನೇಮಕ ಮಾಡಿ ಕುಲ ಶಾಸ್ತ್ರೀಯ ಅಧ್ಯಯನಕ್ಕೆ ಅನುವು ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಖ್ಯ ಮಂತ್ರಿಗಳಾದ ಸನ್ಮಾನ ಶ್ರೀ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕೆ ಅವರಿಗೆ ಸಮುದಾಯವು ಋಣಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.