ಈಡಿಗ ನಿಗಮಕ್ಕೆ 250 ಕೋಟಿ ರೂ.ಗಳನ್ನು ಒದಗಿಸಲು ಒತ್ತಾಯ

ಕಲಬುರಗಿ,ಜೂ.26: ಈಡಿಗ ಸಮಾಜದ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಸಮಾಜದ ಗುರುಗಳಾದ ಡಾ. ಪ್ರಣಾವನಂದ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಜಿಲ್ಲಾಧ್ಯಕ್ಷ ಸುರೇಶ್ ಗುತ್ತೇದಾರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ವರ್ಷಕ್ಕೆ 250 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದ್ದು, ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾ¬ಸಿದರು.
ಹಿಂದಿನ ಸರ್ಕಾರ ಆದೇಶ ಮಾಡಿದ್ದ ಕುಲಶಾಸ್ತ್ರೀಯ ಅಧ್ಯಯನವನ್ನು ಕೂಡಲೇ ಪ್ರಾರಂಭ ಮಾಡಬೇಕು ಹಾಗೂ ಈಡಿಗ ಸಮಾಜವನ್ನು ಎಸ್‍ಟಿಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕುಲಕಸುಬು ಸೇಂದಿ ಹಾಗೂ ನೀರಾ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವಂತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಸ್ಥಾಪಿಸುವಂತೆ ಹಾಗೂ ಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಸ್ಥಾಪಿಸುವಂತೆ, ಗುರುಗಳ ಹೆಸರಿನಲ್ಲಿ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಉತ್ತರ ಕನ್ನಡ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಸ್ಥಾಪಿಸುವಂತೆ ಅವರು ಒತ್ತಾಯಿಸಿದರು.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಶ್ರೀ ಹೆಂಡದ ಮಾರಯ್ಯನವರ ಜಯಂತಿಯನ್ನು ಆಚರಿಸುವಂತೆ, ಸಮುದಾಯದ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹಿಂದಿನ ಸರ್ಕಾರ ನೀಡಿದ ಕಾನೂನು ಗೊಂದಲಗಳನ್ನು ದೂರ ಮಾಡಿ ದೇವಸ್ಥಾನವನ್ನು ಧರ್ಮದರ್ಶಿ ಡಾ. ರಾಮಪ್ಪನವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡುವಂತೆ ಅವರು ಆಗ್ರಹಿಸಿದರು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಬೋಧಿಸಲು ಪಠ್ಯದಲ್ಲಿ ಅಳವಡಿಸುವಂತೆ, ಸರ್ಕಾರಿ ಜಾಗದಲ್ಲಿ ಈಚಲು, ತಾಳೆ, ಬೈನೆ ಹಾಗೂ ತೆಂಗಿನ ಮರಗಳನ್ನು ಸರ್ಕಾರದ ಖರ್ಚಿನಲ್ಲಿ ಬೆಳೆಸಿ ಸಮುದಾಯದ ಮಕ್ಕಳಿಗೆ ಸ್ವ ಉದ್ಯೋಗ ಮಾಡಲು ಅವಕಾಶ ಮಾಡಿಕೊಡುವಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣವಾದ ನೂತನ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಹೆಸರು ಇಡುವಂತೆ ಅವರು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಬೇಡಿಕೆಗಳ ಈಡೇರಿಕೆಗಾಗಿ ಗುರುಗಳಾದ ಪ್ರಣಾವಾನಂದ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ಮಾಡಿಕೊಂಡು ಬರಲಾಗಿದೆ. ಆದಾಗ್ಯೂ, ಯಾವುದೇ ಕಾರ್ಯರೂಪಕ್ಕೆ ಬರಲಿಲ್ಲ. ಈಗ ನೂತನ ಕಾಂಗ್ರೆಸ್ ಸರ್ಕಾರದ ಮೇಲೆ ನಿರೀಕ್ಷೆ ಇದೆ. ಆ ಕುರಿತು ವಿಳಂಬ ಹಾಗೂ ಅಲಕ್ಷ್ಯ ಮಾಡಿದರೆ ಬೀದಿಗಿಳಿದು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರವಿ ಸೂಲಹಳ್ಳಿ ಗುತ್ತೇದಾರ್, ಬಿ.ಎಂ. ರಾವೂರ್, ಶಂಕರ್ ರಾವೂರಕರ್ ಮುಂತಾದವರು ಉಪಸ್ಥಿತರಿದ್ದರು.