ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆಗೆ ಒತ್ತಾಯ

ಕಲಬುರಗಿ,ಜು.20- ರಾಜ್ಯ ಸರ್ಕಾರದಿಂದ ಘೋಷಣೆಯಾದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮದ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಂಡು ವಾರ್ಷಿಕ 250 ಕೋಟಿ ಬಜೆಟ್ ಬಿಡುಗಡೆ ಮಾಡಬೇಕು ಹಾಗೂ ನಿಗಮದ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನಿಯೋಜನೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ನಿಗಮದ ಅಧ್ಯಕ್ಷರಾದ ಸತೀಶ್ ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ ಸಲ ಬಿಜೆಪಿ ಸರಕಾರ ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮದ ಬಗ್ಗೆ ಈ ಬಾರಿ ಬಜೆಟ್ ನಲ್ಲಿಕಾಂಗ್ರೆಸ್ ಸರಕಾರ ಯಾವುದೇ ಪ್ರಸ್ತಾಪ ಮಾಡದೆ ರಾಜ್ಯದ ಸುಮಾರು 70 ಲಕ್ಷ ಈಡಿಗ , ಬಿಲ್ಲವ, ನಾಮಧಾರಿ ದೀವರ ,ನಾಯಕ್ ಸೇರಿದಂತೆ 26 ಪಂಗಡಗಳಿಗೆ ತೀವ್ರ ನೋವು ಉಂಟಾಗಿದೆ.
Àಕ್ಷಣದಲ್ಲಿ ಸರ್ಕಾರವು ಪೂರಕ ಬಜೆಟ್ ನಲ್ಲಿ ಹಣವನ್ನು ಘೋಷಣೆ ಮಾಡಿ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಿಸುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿ ಗುರುತಿಸಿರುವ ಈಡಿಗ – ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ವಾರ್ಷಿಕವಾಗಿ 250 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದು ತಕ್ಷಣದಲ್ಲೇ ಈ ಹಣ ಮಂಜೂರು ಮಾಡಿ ವಚನ ಬದ್ಧತೆಯನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಈ ಸಮುದಾಯಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುಮತಿ ನೀಡಿ ಆದೇಶವನ್ನು ಹೊರಡಿಸಲಾಗಿದ್ದು ಇದನ್ನು ಕೂಡಲೇ ವಿಶ್ವವಿದ್ಯಾಲಯಸಮಾಜಶಾಸ್ತ್ರ ವಿಭಾಗದ ತಜ್ಞರನ್ನು ನೇಮಿಸಿ ಅಧ್ಯಯನ ಆರಂಭಿಸುವಂತೆ ಮತ್ತು ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪೀಠವನ್ನು ಆರಂಭಿಸುವಂತೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಅದನ್ನು ಕೂಡಲೇ ಆರಂಭ ಮಾಡಬೇಕು. ಈಗಾಗಲೇ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ತೀವ್ರವಾದ ಹೋರಾಟ ಮತ್ತು ಪಾದಯಾತ್ರೆ ಕೈಗೊಂಡ ಪರಿಣಾಮವಾಗಿ ಕಳೆದ ಬಾರಿ ಬಿಜೆಪಿ ಸರ್ಕಾರ ಅಂತಿಮ ಕ್ಷಣದಲ್ಲಿ ಈಡಿಗ ನಿಗಮವನ್ನು ಘೋಷಿಸಿದ್ದು ಈ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ರಚನೆಯಾದಲ್ಲಿ ರಾಜ್ಯದ 70 ಲಕ್ಷ ಈಡಿಗ- ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ನ್ಯಾಯ ಕಲ್ಪಿಸುವುದಾಗಿ ಭರವಸೆ ನೀಡಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಂಡು ಈ ಸಮುದಾಯದ ಸವಾರ್ಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರವು ತಕ್ಷಣ ಸ್ಪಂದನೆ ಮಾಡಲು ಸಮಿತಿಯ ಎಲ್ಲ ಸದಸ್ಯರು
ಒಕ್ಕೊರಳಿನಿಂದ ಒತ್ತಾಯಿಸುತ್ತಿದ್ದೇವೆ ಎಂದರು.
ಈಡಿಗ ಸಮುದಾಯದ ಪ್ರಮುಖ ನಾಯಕರನ್ನು ಈ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಂಡು ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಉತ್ತರ ಕರ್ನಾಟಕದ ಒಬ್ಬರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಸಚಿವ ಸ್ಥಾನ ನೀಡಲು ಆಗ್ರಹ:
ಸಚಿವ ಸಂಪುಟದಲ್ಲಿ ಸಮುದಾಯದ ಇಬ್ಬರನ್ನು ಸಚಿವರನ್ನಾಗಿ ನೇಮಿಸುವುದು ಸಂಪ್ರದಾಯವಾಗಿದ್ದರೂ ಈ ಬಾರಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಮಾಜದ ಹಿರಿಯ ಮುಖಂಡರಾದ ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಅವರನ್ನು ಸಚಿವ ಸಂಪುಟದ ಸದಸ್ಯರ ಆಯ್ಕೆಯ ವೇಳೆ ಪರಿಗಣಿಸದೆ ಇರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.
ಮುಂದಿನ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಮುದಾಯಕ್ಕೆ ನ್ಯಾಯವನ್ನು ಕಲ್ಪಿಸಬೇಕು ಮತ್ತು ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು. ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ನಡೆದು ರಾಜ್ಯದ ಅತೀ ದೊಡ್ಡ ಸಮುದಾಯದ ಪ್ರೀತಿಗೆ ಪಾತ್ರವಾಗಬೇಕು. ವಚನಭ್ರಷ್ಟರಾದರೆ ಕೂಡಲೇ ಸಮುದಾಯದ ಸಭೆ ಕರೆದು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಈ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈಡಿಗ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಹಿಂದುಳಿದ ಸಮುದಾಯದ ಕೂಗಿಗೆ ಭರವಸೆ ತುಂಬಬೇಕು ಎಂದು ಅವರು ಆಗ್ರಹಿಸಿದ್ದಾರೆ.